ನವದೆಹಲಿ: 2022ರಲ್ಲಿ ಭಾರತದಲ್ಲಿ 5ರಿಂದ 19 ವರ್ಷದ 12.5 ಮಿಲಿಯನ್ ಮಕ್ಕಳು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಇದರಲ್ಲಿ 7.3 ಮಿಲಿಯನ್ ಹುಡುಗರಾದರೆ, 5.2 ಮಿಲಿಯನ್ ಹುಡುಗಿಯರು ಎಂದು ದಿ ಲ್ಯಾನ್ಸೆಟ್ ಜರ್ನಲ್ ವರದಿ ತಿಳಿಸಿದೆ.
ಜಾಗತಿಕವಾಗಿ ಅಧಿಕ ಸ್ಥೂಲಕಾಯದಿಂದ ಬಳಲುತ್ತಿರುವ ಮಕ್ಕಳು ಮತ್ತು ಹದಿಹರೆಯದವರು ಹಾಗೂ ವಯಸ್ಕರ ಸಂಖ್ಯೆ 1 ಬಿಲಿಯನ್ ದಾಟಿದೆ. ಸ್ಥೂಲಕಾಯ ಮತ್ತು ಕಡಿಮೆ ತೂಕ ಎರಡು ಅಪೌಷ್ಟಿಕಾಂಶದ ಎರಡು ರೂಪ. ಇದು ಜನರ ಆರೋಗ್ಯದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಇತ್ತೀಚಿನ ಅಧ್ಯಯನವು ಕಳೆದ 33 ವರ್ಷಗಳ ಅಪೌಷ್ಟಿಕಾಂಶದ ಎರಡೂ ರೂಪದ ಕುರಿತು ವಿವರವಾದ ಚಿತ್ರಣ ನೀಡುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ(WHO) ಅಂದಾಜಿಸಿದಂತೆ ಜಾಗತಿಕವಾಗಿ ಮಕ್ಕಳು ಮತ್ತು ಹದಿಹರೆಯದವರ ಸ್ಥೂಲಕಾಯತೆ ದರ 1990ರ ದರಕ್ಕೆ ಹೋಲಿಸಿದಾಗ 2022ರಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದೆ. 1990ರಲ್ಲಿ ವಯಸ್ಕರಲ್ಲಿ ಹೆಚ್ಚಿದ್ದ ಸ್ಥೂಲಕಾಯತೆ ಇದೀಗ ಶಾಲಾ ವಯಸ್ಸಿನ ಮಕ್ಕಳು ಮತ್ತು ಹದಿಹರೆಯದವರಲ್ಲಿ ಸ್ಥೂಲಕಾಯತೆ ಸಾಂಕ್ರಾಮಿಕತೆ ಹೆಚ್ಚುತ್ತಿರುವುದು ಕಾಳಜಿಯ ವಿಚಾರ ಎಂದು ಯುಕೆಯ ಇಂಪಿರಿಯಲ್ ಕಾಲೇಜ್ ಲಂಡನ್ನ ಪ್ರೊ.ಮಜಿದ್ ಎಜ್ಜಾತಿ ತಿಳಿಸಿದ್ದಾರೆ.
ಅಪೌಷ್ಟಿಕತೆ ಸಮಸ್ಯೆ: ಇದೇ ವೇಳೆ ಜಾಗತಿಕವಾಗಿ ನೂರಾರು ಮಿಲಿಯನ್ ಮಂದಿಯನ್ನು ಅಪೌಷ್ಟಿಕತೆ ಕೂಡ ಕಾಡುತ್ತದೆ. ವಿಶೇಷವಾಗಿ ಜಗತ್ತಿನ ಬಡ ಪ್ರದೇಶದಲ್ಲಿ ಈ ಬೆಳವಣಿಗೆ ಹೆಚ್ಚು. ವಯಸ್ಕರಲ್ಲಿ ಜಾಗತಿಕ ಸ್ಥೂಲಕಾಯತೆ ದರದಲ್ಲಿ ಮಹಿಳೆಯರಲ್ಲಿ ಎರಡು ಪಟ್ಟು ಹೆಚ್ಚಾದರೆ, ಪುರುಷರಲ್ಲಿ ಮೂರು ಪಟ್ಟು ಅಧಿಕವಾಗಿದೆ. ಒಟ್ಟಾರೆ 2022ರಲ್ಲಿ 159 ಮಿಲಿಯನ್ ಮಕ್ಕಳು ಮತ್ತು ಹದಿಹರೆಯದವರು ಮತ್ತು 879 ಮಿಲಿಯನ್ ವಯಸ್ಕರು ಸ್ಥೂಲಕಾಯತೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನ ಹೇಳಿದೆ.
ಭಾರತದಲ್ಲಿ ವಯಸ್ಕರ ಸ್ಥೂಲಕಾಯತೆ 1990ರಲ್ಲಿ 1.2ರಷ್ಟಿದ್ದರೆ, 2022ರಲ್ಲಿ 9.8ರಷ್ಟಿದೆ. ಮಹಿಳೆಯರಲ್ಲಿ 0.5ರಷ್ಟಿದ್ದರೆ, ಪುರುಷರಲ್ಲಿ 5.4ರಷ್ಟಿದೆ. 2022ರಲ್ಲಿ 44 ಮಿಲಿಯನ್ ಮಹಿಳೆಯರು ಮತ್ತು 26 ಮಿಲಿಯನ್ ಪುರುಷರು ಸ್ಥೂಲಕಾಯತೆ ಹೊಂದಿರುವ ಅಂಕಿಅಂಶವಿದೆ.