ಕಳೆದ ಜೂನ್ನಿಂದ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮತ್ತು ನಟ ಜಹೀರ್ ಇಕ್ಬಾಲ್ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಅಂತರ್ಧರ್ಮೀಯ ಮದುವೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸರಳವಾಗಿ ತಮ್ಮ ನಿವಾಸದಲ್ಲೇ ಕುಟುಂಬಸ್ಥರು, ಆತ್ಮೀಯರ ಸಮ್ಮುಖದಲ್ಲಿ ಮದುವೆಗೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕಿದದ್ದರು. ಸೋನಾಕ್ಷಿ ಸಿನ್ಹಾರನ್ನು ಮದುವೆಯಾಗಲು ಅವರ ತಂದೆ ನಟ-ರಾಜಕಾರಣಿ ಶತ್ರುಘ್ನ ಸಿನ್ಹಾ ಬಳಿ ಅನುಮತಿ ಕೇಳಿದ ಕ್ಷಣವನ್ನು, ಅಂದಿನ ತಮ್ಮ ಆತಂಕವನ್ನು ಜಹೀರ್ ಇಕ್ಬಾಲ್ ಹಂಚಿಕೊಂಡಿದ್ದಾರೆ. ಮಾತುಕತೆ ಸಂದರ್ಭ ಬಹಳ ಆತಂಕಗೊಂಡಿದ್ದೆ, ಭಯವಾಗಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ.
"ನಾನು ಅನುಮತಿ ತೆಗೆದುಕೊಳ್ಳಲು ಹೋದಾಗ ಬಹಳ ಭಯವಾಗಿತ್ತು. ಹೆದರಿಕೆಯಿಂದ ನಾನು ನಡುಗುತ್ತಿದ್ದೆ. ಮಾತು ಆರಂಭಿಸಿದೆ. ಅವರು ಖಾಮೋಶ್ (silence) ಎಂದು ಹೇಳಿದ್ದು ನನಗೆ ಕೇಳಿಸಿತು. ಆದ್ರೆ ಅವರು ಬಹಳ ನಾಜೂಕಾಗಿ ಮಾತನಾಡಿದರು. ಲವ್ಲೀಯಾಗಿದ್ದರು'' ಎಂದು ಜಹೀರ್ ಇಕ್ಬಾಲ್ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಅಂದಿನ ಸಂಭಾಷಣೆಯನ್ನು ನೆನಪಿಸಿಕೊಳ್ಳುತ್ತ, "ನಾನು ತೊದಲುತ್ತಾ ಅವರಿಗೆ ಹೇಳಿದೆ, 'ಅಂಕಲ್, ಸೋನಾ ನಿಮಗೆ ಈಗಾಗಲೇ ಹೇಳಿರಬಹುದು. ನಾವು.....'' ಈ ಮಾತಿಗೆ ಪ್ರತಿಕ್ರಿಯಿಸಿದ ಅವರು, 'ಹಾ, ಹೇಳಿದ್ದಾಳೆ' ಎಂದು ತಿಳಿಸಿದರು. ಮಾತು ಮುಂದುವರಿಸಿದ ನಾನು, 'ಅಂಕಲ್, ನಾನು ಈ ಬಗ್ಗೆ ಯೋಚಿಸುತ್ತಿದ್ದೆ.. ನಾನು ಸ್ವಲ್ಪ, ಸ್ವಲ್ಪ, ಅಲ್ಲ ಸಂಪೂರ್ಣವಾಗಿ ಪ್ರಪೋಸ್ ಮಾಡಿ ಬಿಡುತ್ತೇನೆ ಎಂದುಬಿಟ್ಟೆ. ಅದಕ್ಕೆ ಅವರು, 'ಅಚ್ಹಾ, ವೆರಿ ಗುಡ್' ಎಂದು ಹೇಳಿದರು.