ಚಾಮರಾಜನಗರ:ಯುವ ರಾಜ್ಕುಮಾರ್ ನಟನೆಯ 'ಯುವ' ಚಿತ್ರದ ಮೊದಲ ಹಾಡು 'ಒಬ್ಬನೇ ಶಿವ ಒಬ್ಬನೇ' ಚಾಮರಾಜನಗರದಲ್ಲಿ ಬಿಡುಗಡೆಯಾಯಿತು. ಚಾಮರಾಜೇಶ್ವರ ದೇಗುಲ ಮುಂಭಾಗ ನಿರ್ಮಿಸಿದ್ಧ ವೇದಿಕೆಯಲ್ಲಿ ಜಿಲ್ಲೆಯ 5 ತಾಲೂಕಿನಿಂದ ತಲಾ ಓರ್ವ ಅಭಿಮಾನಿಯನ್ನು ಆಯ್ದು ಅವರ ಮೂಲಕ ಹಾಡನ್ನು ಲೋಕಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನೆರೆದಿದ್ದ ಅಭಿಮಾನಿಗಳು ಅಪ್ಪು, ಯುವ ಎಂಬ ಘೋಷಣೆಗಳನ್ನು ಕೂಗಿದರು.
ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಂ ಮಾತನಾಡಿ, "ಪುನೀತ್ ಜೊತೆ 7 ವರ್ಷ ಕಳೆದಿದ್ದೇನೆ, ಅವರ ಅಗಲಿಕೆಯ ಬಳಿಕ ಯಾವತ್ತೂ ಅಭಿಮಾನಿಗಳು ನನ್ನನ್ನು ಒಬ್ಬಂಟಿಯಾಗಿ ಬಿಡಲಿಲ್ಲ. ಸಾಕಷ್ಟು ಮಂದಿ ನನ್ನ ಜೊತೆಗೆ ನಿಂತರು. ಅಪ್ಪು ಬಿಟ್ಟು ಹೋದ ನೆನಪು, ಆಶೀರ್ವಾದದಿಂದ ಯುವ ಜೊತೆ ಕೆಲಸ ಮಾಡುವಂತಾಯಿತು. ಪುನೀತ್ ಅವರ ಪೂರ್ತಿ ಆಶೀರ್ವಾದ ಚಿತ್ರದ ಮೇಲಿದೆ. ಅವರ ಅಭಿಮಾನಿಗಳು ಹೆಮ್ಮೆಪಡುವ ಸಿನಿಮಾ ಇದಾಗಲಿದೆ. ತುಂಬಾ ಅಭಿಮಾನದಿಂದ ಚಿತ್ರ ಮಾಡಿದ್ದೇನೆ, ಅಪ್ಪು ಜನ್ಮದಿನಕ್ಕೆ ಮತ್ತೊಂದು ಹಾಡು ಬರಲಿದೆ" ಎಂದು ತಿಳಿಸಿದರು.