'ಕೆಜಿಎಫ್' ಎಂಬ ಬ್ಲಾಕ್ಬಸ್ಟರ್ ಸಿನಿಮಾದಲ್ಲಿನ ಅಮೋಘ ಅಭಿನಯದ ಮೂಲಕ ವಿಶ್ವದಾದ್ಯಂತ ಹೆಸರು ಮಾಡಿರುವ ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಯಶ್ ಜನಪ್ರಿಯತೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಎಷ್ಟೇ ದೊಡ್ಡ ಸ್ಟಾರ್ ಆಗಿದ್ರೂ ರಾಕಿಂಗ್ ಸ್ಟಾರ್ ಪಕ್ಕಾ ಫ್ಯಾಮಿಲಿಮ್ಯಾನ್ ಅನ್ನೋದು ಬಹುತೇಕರಿಗೆ ಗೊತ್ತಿರುವ ವಿಚಾರವೇ.
ಬಹಳ ದಿನಗಳಿಂದ ಮುಂಬೈನಲ್ಲಿ ತಮ್ಮ 'ಟಾಕ್ಸಿಕ್' ಶೂಟಿಂಗ್ನಲ್ಲಿ ಬ್ಯುಸಿಯಾಗಿರುವ ಕೆಜಿಎಫ್ ಸ್ಟಾರ್ ಈಗ ತಮ್ಮ ಕಂಪ್ಲೀಟ್ ಫ್ಯಾಮಿಲಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ರಾಕಿ ಭಾಯ್ ಸುತ್ತಲೂ ಅಭಿಮಾನಿಗಳು ಜಮಾಯಿಸಿದ್ದರು. ಓರ್ವ ಕಟ್ಟಾ ಅಭಿಮಾನಿ ಬಂದು ನಟನ ಕಾಲು ಮುಟ್ಟಿ ಆಶೀರ್ವಾದ ಪಡೆದಿದ್ದಾರೆ.
ಕೆಜಿಎಫ್ ಚಾಪ್ಟರ್ 2 ಎಂಬ ಅಭೂತಪೂರ್ವ ಯಶಸ್ಸಿನ ಬಳಿಕ ಬರುತ್ತಿರುವ ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟನ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್'. ಸದ್ಯ ಯಶ್ ತಮ್ಮ ಟಾಕ್ಸಿಕ್ ಸಿನಿಮಾ ಸಲುವಾಗಿ ಮುಂಬೈನಲ್ಲಿದ್ದು, ಈಗಾಗಲೇ ಕೆಲ ವಿಡಿಯೋಗಳು ವೈರಲ್ ಆಗಿವೆ. ಕೆಲ ದಿನಗಳ ಹಿಂದಷ್ಟೇ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಜೊತೆಗಿನ ವಿಡಿಯೋ ವೈರಲ್ ಆಗಿತ್ತು. ಇದೀಗ ಪತ್ನಿ ರಾಧಿಕಾ ಪಂಡಿತ್, ಪುತ್ರಿ ಐರಾ, ಪುತ್ರ ಯಥರ್ವ್ ಜೊತೆ ಕಾಣಿಸಿಕೊಂಡಿದ್ದಾರೆ.
ಸಿನಿಮಾ ಜೊತೆಗೆ ಕುಟುಂಬಕ್ಕೆ ಮೊದಲ ಆದ್ಯತೆ ಕೊಡುವ ನಟ ಹೆಂಡತಿ, ಮಕ್ಕಳೊಂದಿಗೆ ಮುಂಬೈ ಬೀದಿಗಳಲ್ಲಿ ಸುತ್ತಾಡಿದ್ದು, ಫೋಟೋ ವಿಡಿಯೋಗಳು ವ್ಯಾಪಕವಾಗಿ ವೈರಲ್ ಆಗಿವೆ. ಮುಂಬೈನ ಪಾಪರಾಜಿಗಳು ರಾಕಿಂಗ್ ಸ್ಟಾರ್ನ ಫ್ಯಾಮಿಲಿ ಟೈಮ್ ಅನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆ ಹಿಡಿದು, ಇಂಟರ್ನೆಟ್ನಲ್ಲಿ ಹರಿಬಿಟ್ಟಿದ್ದಾರೆ. ಅಭಿಮಾನಿಗಳಿಂದ 'ರಾಕಿಭಾಯ್ ಪಕ್ಕಾ ಫ್ಯಾಮಿಲಿ ಮ್ಯಾನ್' ಎಂಬ ಮೆಚ್ಚುಗೆ ವ್ಯಕ್ತವಾಗುತ್ತಿವೆ.
ಯಶ್ ಅವರ ಮಾರುಕಟ್ಟೆಯೀಗ ಗಡಿ ದಾಟಿದೆ. ಚಂದನವನಕ್ಕೆ ಸೀಮಿತವಾಗಿರದೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಭಾರತದ ಮೂಲೆ ಮೂಲೆಗಳಲ್ಲೂ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಅದರಂತೆ ಮುಂಬೈನಲ್ಲೂ ಯಶ್ ಸುತ್ತ ಅಭಿಮಾನಿಗಳು ಬಂದು ಸೇರಿದ್ದರು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರೂ ಕೂಡಾ ಪ್ರತಿಭಾನ್ವಿತ ನಟನನ್ನು ಕಣ್ತುಂಬಿಕೊಂಡು ಖುಷಿಪಟ್ಟರು. ಬಿಗಿ ಭದ್ರತೆ ನಡುವೆ ಯಶ್ ಕುಟುಂಬ ಸಾಗುತ್ತಿದ್ದ ಸಂದರ್ಭ, ಅಭಿಮಾನಿಯೋರ್ವರು ಬಂದು ನಟನ ಕಾಲಿಗೆ ಬಿದ್ದಿದ್ದಾರೆ. ಆಗ ಯಶ್ ಕಾಲಿಗೆ ಬೀಳೋದು ಬೇಡ ಎಂದು ಕೈ ಸನ್ನೆ ಮೂಲಕ ತೋರಿಸಿದ್ದಾರೆ. ಇನ್ನೂ, ಪುಟ್ಟ ಮಗುವಿನೊಂದಿಗೆ ಫೋಟೋಗೆ ಪೋಸ್ ಕೂಡಾ ನೀಡಿದ್ದಾರೆ.
ಇದನ್ನೂ ಓದಿ:'ಕೆಜಿಎಫ್ 2'ನಿಂದಾಗಿ ಚಿತ್ರರಂಗ ಮಿಂಚಿದೆ: ಯಶ್ ಗುಣಗಾನ ಮಾಡಿದ ಸೌತ್ ಸೂಪರ್ಸ್ಟಾರ್
ಈಗಾಗಲೇ ಘೋಷಣೆ ಮಾಡಿರುವ ಟಾಕ್ಸಿಕ್ ಬಿಡುಗಡೆ ದಿನಾಂಕ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಸಿನಿಮಾ ಕೆಲಸಗಳು ಭರದಿಂದ ಸಾಗಿದೆ. ಬೆಂಗಳೂರಿನಲ್ಲಿ ಈಗಾಗಲೇ ಚಿತ್ರೀಕರಣ ನಡೆದಿದ್ದು, ಸದ್ಯ ಮುಂಬೈನಲ್ಲಿ ಶೂಟಿಂಗ್ ಸಾಗಿದೆ. ಕಿಯಾರಾ ಅಡ್ವಾಣಿ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ವಿಡಿಯೋಗಳು ವೈರಲ್ ಆಗಿವೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಸಿನಿಮಾದ ಮೇಲಿನ ನಿರೀಕ್ಷೆಗಳು ದೊಡ್ಡ ಮಟ್ಟದಲ್ಲೇ ಇದೆ.
ಇದನ್ನೂ ಓದಿ:'ನನ್ನನ್ನು ಗೋಮುಖ ವ್ಯಾಘ್ರ ಅನ್ನೋ ಮೋಕ್ಷಿತಾ ಎರಡು ತಲೆ ನಾಗರಹಾವು': ತ್ರಿವಿಕ್ರಮ್ ಆಕ್ರೋಶ
ಬಾಲಿವುಡ್ನಲ್ಲಿ ಪಾಪರಾಜಿ ಸಂಸ್ಕೃತಿ ದೊಡ್ಡದಾಗಿ ಇದೆ. ಸಿನಿ ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಎಲ್ಲೇ ಕಾಣಿಸಿಕೊಂಡರೂ ಅವರ ವಿಡಿಯೋಗಳು ಆ ಕೂಡಲೇ ಪೋಸ್ಟ್ ಆಗಿ ಶರವೇಗದಲ್ಲಿ ವೈರಲ್ ಆಗುತ್ತವೆ. ಈ ಟ್ರೆಂಡ್ ಬಹುತೇಕರಿಗೆ ಹಿಡಿಸಿದರೆ, ಕೆಲವರು ಮೆಚ್ಚಿಕೊಳ್ಳುವುದಿಲ್ಲ. ಸದ್ಯ ಯಶ್ ಮುಂಬೈನಲ್ಲಿರುವ ಹಿನ್ನೆಲೆಯಲ್ಲಿ ಅವರ ವಿಡಿಯೋಗಳು ವ್ಯಾಪಕವಾಗಿ ವೈರಲ್ ಆಗುತ್ತಿವೆ.