ಬಿಗ್ ಬಾಸ್ ಕನ್ನಡ ಸೀಸನ್ 11 ಏಳನೇ ವಾರ ಪೂರ್ಣಗೊಳಿಸಿ, ಎಂಟನೇ ವಾರ ಶುಭಾರಂಭ ಮಾಡಿದೆ. ಇಬ್ಬರು ವೈಲ್ಡ್ಕಾರ್ಡ್ ಸ್ಪರ್ಧಿಗಳು ಮನೆಮಂದಿಗೆ ಸಿಹಿಕಹಿ ಹಂಚಿ ತಮ್ಮ ದಿನ ಆರಂಭಿಸುವಂತೆ ತೋರುತ್ತಿದೆ. ಕಳೆದ ಸಂಚಿಕೆಯಲ್ಲಿ ಅನುಷಾ ಅವರು ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿದ್ದಾರೆ.
''ಡಬಲ್ ವೈಲ್ಡ್ ಕಾರ್ಡ್ ಎಂಟ್ರಿಗೆ ಯಾರೆಲ್ಲಾ ಶೇಕ್ ಆದ್ರು?'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಬಿಗ್ ಬಾಸ್ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದೆ. ಈ ಪ್ರೋಮೋ ಸಂಪೂರ್ಣ ಸಂಚಿಕೆ ವೀಕ್ಷಿಸುವ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಇಬ್ಬರು ವೈಲ್ಡ್ಕಾರ್ಡ್ ಸ್ಪರ್ಧಿಗಳ ಎಂಟ್ರಿ ಬಹಳ ಅದ್ಧೂರಿಯಾಗಿಯೇ ಆಗಿದೆ.
ಮುಂಜಾನೆ ಸಾಂಗ್ ಬದಲು, ತಂಡವೊಂದು ಒಳಗೆ ಆಗಮಿಸಿ ಮ್ಯೂಸಿಕ್ ಪೂರೈಸಿದ್ದಾರೆ. ಈಗಾಗಲೇ 50 ದಿನಗಳನ್ನು ಪೂರೈಸಿರುವ ಬಿಗ್ ಬಾಸ್ ಶೋಗೆ ಕಿರುತೆರೆ ಲೋಕದ ಶೋಭಾ ಶೆಟ್ಟಿ ಮತ್ತು ರಜತ್ ಕಿಶನ್ ಎಂಟ್ರಿಕೊಟ್ಟಿದ್ದಾರೆ. ಅವರನ್ನು ಮನೆಮಂದಿ ಸ್ವಾಗತಿಸಿದ್ದಾರೆ. ನಂತರ, ಸ್ಪರ್ಧಿಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶವನ್ನು ಈ ಇಬ್ಬರಿಗೆ ಕೊಟ್ಟಿದ್ದಾರೆ. ಜೊತೆಗೆ, ಕಾಯಿ ಒಡೆಯಬೇಕಿದೆ. ತ್ರಿವಿಕ್ರಮ್ ಅವರನ್ನು ಟೀಕಿಸಿದ ರಜತ್, ನೀವು ಈ 50 ದಿನಗಳಲ್ಲಿ ಸಾಧಿಸಿರೋದನ್ನು ನಾನು ವೈಲ್ಡ್ಕಾರ್ಡ್ ಎಂಟ್ರಿ ಮೂಲಕ ಮಾಡಿ ತೋರಿಸುತ್ತೇನೆ ಎಂದು ಹೇಳಿದ್ದಾರೆ. ಶೋಭಿತಾ ಶೆಟ್ಟಿ ಮಾತನಾಡಿ, ಆಪ್ತ ಸ್ನೇಹಿತರಾದ ಮಂಜು ಮತ್ತು ಗೌತಮಿ ಬಗ್ಗೆ ವ್ಯಂಗ್ಯವಾಡಿದ್ದಾರೆ. ನೀವು ನಂಬಿಕೆಗೆ ಅರ್ಹರಲ್ಲ ಎಂದು ಮಂಜು ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ಕಾಯಿ ಒಡೆದಿದ್ದಾರೆ.
ಫ್ರೆಂಡ್ ಅಂತಾರೆ, ಅವ್ರ್ ಬಗ್ಗೆ ಇವ್ರ್ ಮಾತನಾಡುತ್ತಿದ್ದಾರೆ, ಇವ್ರು ಬಗ್ಗೆ ಅವ್ರು ಮಾತನಾಡುತ್ತಿದ್ದಾರೆ. ಮುಖವಾಡ ಹಾಕೊಂಡಿದ್ದಾರೆ ಗೌತಮಿ ಅವ್ರು. ಆ ಒಂದು ಮುಖವಾಡವನ್ನು ನಾನು ಬಯಲು ಮಾಡಬಹುದು ಎಂದು ಹೇಳುತ್ತಾ ಕಾಯಿ ಒಡೆದಿದ್ದಾರೆ. ಆದ್ರೆ ಆ ಕಾಯಿ ಬ್ರೇಕ್ ಆಗಿಲ್ಲ. ಗೌತಮಿ ವ್ಯಂಗ್ಯ ನಗು ಬೀರಿ, ಅದು ಕ್ರ್ಯಾಕ್ ಆಗ್ಲಿಲ್ವಾ? ಒಡಿರಿ, ಒಡಿರಿ ಎಂದು ತಿಳಿಸಿದ್ದಾರೆ. ಮತ್ತೊಮ್ಮೆ ಕಾಯಿ ಒಡೆದು ಶುರುವಲ್ಲೇ ವೈರತ್ವ ಕಟ್ಟಿಕೊಳ್ಳುವಂತೆ ತೋರುತ್ತಿದೆ.