ತಾರಾ ಜೋಡಿ ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಅವರ ಅದ್ಧೂರಿ ವಿವಾಹ ಡಿಸೆಂಬರ್ 4ರ ರಾತ್ರಿ ಹೈದರಾಬಾದ್‌ನ ಐಕಾನಿಕ್ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆಯಿತು. ಇದೊಂದು ಸಾಂಪ್ರದಾಯಿಕ ತೆಲುಗು ವಿವಾಹ ಸಮಾರಂಭವಾಗಿದ್ದು, ಫೋಟೋ ವಿಡಿಯೋಗಳು ಈಗಾಗಲೇ ವೈರಲ್ ಆಗಿವೆ. ತಮ್ಮ ಜೀವನದ ಹೊಸ ಅಧ್ಯಾಯ ಆರಂಭಿಸಿರುವ ಜೋಡಿ, ಮದುವೆ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ಕೊಟ್ಟಿರುವ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಆಂಧ್ರ ಪ್ರದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀಶೈಲಂಗೆ ನವದಂತಿ ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಭೇಟಿ ಕೊಟ್ಟು ದೇವರ ಆಶೀರ್ವಾದ ಪಡೆದಿದ್ದಾರೆ. ನವದಂಪತಿ ಸಾಂಪ್ರದಾಯಿಕ ನೋಟದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ. ಹಾಗೂ ನವ ಪಯಣಕ್ಕೆ ಶುಭ ಕೋರುತ್ತಿದ್ದಾರೆ.
ಬಹುದಿನಗಳ ಪ್ರೀತಿಗೆ ಡಿಸೆಂಬರ್ 4 ರಂದು ನಡೆದ ಖಾಸಗಿ ಸಮಾರಂಭದಲ್ಲಿ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದ್ದಾರೆ. ಈ ಸಮಾರಂಭ ಆತ್ಮೀಯರಿಗಷ್ಟೇ ಸೀಮಿತವಾಗಿತ್ತು. ವಿವಾಹಿತರಾಗಿ ಇದೇ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಆಂಧ್ರಪ್ರದೇಶದ ಶ್ರೀಶೈಲಂ ದೇವಸ್ಥಾನ ಎಂದೂ ಕರೆಯಲ್ಪಡುವ ಶ್ರೀ ಭ್ರಮರಾಂಬಿಕಾ ಸಮೇತ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ನವ ದಂಪತಿ ಭೇಟಿ ನೀಡಿದ್ದಾರೆ. ನವದಂಪತಿಗೆ ನಾಗ ಚೈತನ್ಯ ಅವರ ತಂದೆ, ನಟ ನಾಗಾರ್ಜುನ ಸಾಥ್ ನೀಡಿದ್ದಾರೆ.
ನಾಗಾರ್ಜುನ ಅವರ ಜೊತೆ ದೇವಾಲಯದಿಂದ ಹೊರಬಂದ ದಂಪತಿಯ ನೋಟ ಪಾಪರಾಜಿಗಳ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಅವರ ಮೊಗದಲ್ಲಿ ಸಂತೋಷ ಎದ್ದು ಕಾಣುತ್ತಿತ್ತು. ವೈಟ್ ಶರ್ಟ್, ಲುಂಗಿ ತೊಟ್ಟು ಸಾಂಪ್ರದಾಯಿಕವಾಗಿ ಸೂಪರ್ ಸ್ಟಾರ್ ನಾಗ ಚೈತನ್ಯ ಕಾಣಿಸಿಕೊಂಡರೆ, ನಟಿ ಶೋಭಿತಾ ಧೂಳಿಪಾಲ ಹಳದಿ ಸೀರೆಯಲ್ಲಿ ಬೆರಗುಗೊಳಿಸುವ ನೋಟ ಬೀರಿದರು. ಫ್ರೀ ಹೇರ್ಸ್ಟೈಲ್ ವಧುವಿನ ಆಕರ್ಷಣೆ ಹೆಚ್ಚಿಸಿತ್ತು.