ನವದೆಹಲಿ: ಕಾಶ್ಮೀರ ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಆಕ್ಸ್ ಫರ್ಡ್ ಯೂನಿಯನ್ ನೀಡಿದ್ದ ಆಹ್ವಾನವನ್ನು ತಾವು ತಿರಸ್ಕರಿಸಿರುವುದಾಗಿ ಚಲನಚಿತ್ರ ನಿರ್ಮಾಪಕ ಹಾಗೂ ಲೇಖಕ ವಿವೇಕ್ ಅಗ್ನಿಹೋತ್ರಿ ಗುರುವಾರ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅವರು, ಆಹ್ವಾನ ಪತ್ರಿಕೆ ಮತ್ತು ಆಹ್ವಾನ ತಿರಸ್ಕರಿಸಿರುವ ಬಗ್ಗೆ ತಿಳಿಸಿದ್ದಾರೆ. ಪತ್ರಗಳನ್ನು ಕೂಡ ಅವರು ಪೋಸ್ಟ್ ಮಾಡಿದ್ದಾರೆ.
"ಕಾಶ್ಮೀರದ ಬಗ್ಗೆ ಚರ್ಚಿಸಲು ಪ್ರತಿಷ್ಠಿತ ಆಕ್ಸ್ಫರ್ಡ್ ಯೂನಿಯನ್ ನನ್ನನ್ನು ಆಹ್ವಾನಿಸಿತ್ತು. ಆದರೆ, ಚರ್ಚೆಯ ವಿಷಯವು ಭಾರತ ವಿರೋಧಿಯಾಗಿರುವುದು ನನಗೆ ತಿಳಿದು ಬಂದಿದ್ದರಿಂದ ತಾತ್ವಿಕವಾಗಿ ನಾನು ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದೇನೆ." ಎಂದು ಅವರು ಬರೆದಿದ್ದಾರೆ.
ತಮ್ಮ ಪತ್ರದಲ್ಲಿ ಆಹ್ವಾನ ತಿರಸ್ಕರಿಸಿರುವ ಬಗ್ಗೆ ಅವರ ವಿವರಣೆ ಹೀಗಿದೆ:"ಪ್ರತಿಷ್ಠಿತ ಯೂನಿಯನ್ನಲ್ಲಿ ನಡೆಯಲಿರುವ ಚರ್ಚೆಗೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು. ಆಕ್ಸ್ ಫರ್ಡ್ ಡಿಬೇಟಿಂಗ್ ಸೊಸೈಟಿಯಲ್ಲಿ ಮಾತನಾಡುವುದು ಪ್ರತಿಯೊಬ್ಬ ಪ್ರಜ್ಞಾವಂತನ ಕನಸಾಗಿದ್ದರೂ, ನಿಮ್ಮ ಆಹ್ವಾನದ ವ್ಯಂಗ್ಯವು ನನಗೆ ಅರ್ಥವಾಗಿದೆ ಮತ್ತು ಸೂಕ್ತ ಪರಿಗಣನೆಯ ನಂತರ, ನಾನು ನಿಮ್ಮ ಆಹ್ವಾನವನ್ನು ಗೌರವಯುತವಾಗಿ ನಿರಾಕರಿಸಲು ನಿರ್ಧರಿಸಿದ್ದೇನೆ. 'ಈ ಸಂಸ್ಥೆಯು ಕಾಶ್ಮೀರವು ಸ್ವತಂತ್ರ ರಾಷ್ಟ್ರವೆಂದು ಪರಿಗಣಿಸುತ್ತದೆ' ಎಂಬ ಚರ್ಚಾ ವಿಷಯವು ಭಾರತದ ಸಾರ್ವಭೌಮತ್ವಕ್ಕೆ ನೇರ ಸವಾಲಾಗಿದೆ ಮತ್ತು ಅದು ನನಗೆ ಸ್ವೀಕಾರಾರ್ಹವಲ್ಲ. ಇದು ಕೇವಲ 1.4 ಶತಕೋಟಿ ಭಾರತೀಯರಿಗೆ ಮಾತ್ರವಲ್ಲ, 1990 ರ ಕಾಶ್ಮೀರ ಹತ್ಯಾಕಾಂಡದ ಬಲಿಪಶುಗಳಾದ ಲಕ್ಷಾಂತರ ಸ್ಥಳಾಂತರಗೊಂಡ ಸ್ಥಳೀಯ ಹಿಂದೂಗಳಿಗೆ ಅವಮಾನವಾಗಿದೆ ಎಂದು ನಾನು ಭಾವಿಸುತ್ತೇನೆ. ಇದನ್ನು ಚರ್ಚೆಯಾಗಿ ರೂಪಿಸುವುದು ದುರಂತವನ್ನು ಆಟವಾಗಿ ಪರಿವರ್ತಿಸಿದಂತೆ ಭಾಸವಾಗುತ್ತದೆ."