ನಟನೆ ಜೊತೆಗೆ ಮಾಸ್ ಇಮೇಜ್ನಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಟಾರ್ ಡಮ್ ಹೊಂದಿರುವ ನಟ ವಿನೋದ್ ಪ್ರಭಾಕರ್. ಮಾದೇವ, ಲಂಕಾಸುರ, ನೆಲ್ಸನ್ ಹೀಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳು ಬಿಡುಗಡೆಗೆ ಸಜ್ಜಾಗಿರೋ ಈ ಹೊತ್ತಿನಲ್ಲಿ, ವಿನೋದ್ ಪ್ರಭಾಕರ್ ಅಭಿನಯದ 25ನೇ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ.
ಇತ್ತೀಚಿಗೆ ಅದ್ಧೂರಿಯಾಗಿ ಟೈಟಲ್ ರಿವೀಲ್ ಈವೆಂಟ್ ನೆರವೇರಿತು. ಇದೇ ಸಂದರ್ಭದಲ್ಲಿ 'ಪದ್ಮಾವತಿ ಫಿಲಂಸ್' ಎಂಬ ನೂತನ ನಿರ್ಮಾಣ ಸಂಸ್ಥೆ ಕೂಡ ಆರಂಭವಾಯಿತು. ಗೃಹ ಸಚಿವರಾದ ಡಾ. ಜಿ.ಪರಮೇಶ್ವರ್ ನೂತನ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿದರು. ವಿನೋದ್ ಪ್ರಭಾಕರ್ ಅಭಿನಯದ 25ನೇ ಸಿನಿಮಾಗೆ 'ಬಲರಾಮನ ದಿನಗಳು' ಹೆಸರಿಡಲಾಗಿದೆ. ಆ ದಿನಗಳು ಖ್ಯಾತಿಯ ಕೆ.ಎಂ ಚೈತನ್ಯ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಿರ್ಮಾಪಕ ಶ್ರೇಯಸ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಈ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. ಇದೇ ಸಂದರ್ಭದಲ್ಲಿ ವಿನೋದ್ ಪ್ರಭಾಕರ್ ಅವರಿಗೆ "ಟೈಗರ್" ಎಂದು ಬಿರುದು ನೀಡಿ ಸನ್ಮಾನಿಸಲಾಗಿದೆ.
ಸಚಿವ ಪರಮೇಶ್ವರ್ ಮಾತನಾಡಿ, ಪ್ರತಿಯೊಬ್ಬರಿಗೂ ಜೀವನದಲ್ಲಿ ವೈದ್ಯ, ಪೊಲೀಸ್, ರಾಜಕಾರಣಿ, ವಿಜ್ಞಾನಿ ಹೀಗೆ ಏನೇನೋ ಆಗಬೇಕು ಎಂಬ ಆಸೆ ಇರುತ್ತದೆ. ಆದರೆ, ನಮ್ಮ ಶ್ರೇಯಸ್ಗೆ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವ ಆಸೆ ಇದ್ದು, ಈ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ಈ ಹಿಂದೆ ಸಿನಿಮಾಗಳಲ್ಲಿ ಸಂದೇಶ ಇರುತ್ತಿತ್ತು. ಮೌಲ್ಯಗಳ ಪಾಠ ಇರುತ್ತಿತ್ತು. ಸದ್ಯ ಕಮರ್ಷಿಯಲ್ ಚಿತ್ರಗಳ ಸಂಖ್ಯೆ ಹೆಚ್ಚಾಗಿದೆ. ಹಣ ಮಾಡಬೇಕು ನಿಜ. ಆದರೆ, ಅದರ ಜೊತೆಗೆ ಚಿತ್ರ ನೋಡುವ ಪ್ರೇಕ್ಷಕರಿಗೆ ಒಂದು ಸಂದೇಶ ಸಹ ಹೋಗಬೇಕು. ಚಲನಚಿತ್ರ ಒಂದು ಪ್ರಬಲ ಮಾಧ್ಯಮ. ಈ ಮಾಧ್ಯಮದ ಮೂಲಕ ಜನರ ಮನಸ್ಸು ಬದಲಾವಣೆ ಮಾಡುವ ಅವಕಾಶವಿರುತ್ತದೆ. ಹಾಗಾಗಿ, ಯಾವ ಸಿನಿಮಾ ಮಾಡಿದರೂ ಅದರ ಮೂಲಕ ಪ್ರೇಕ್ಷಕರಿಗೆ ಒಂದು ಸಂದೇಶ ಕೊಡಿ. ನನಗೆ ಟೈಗರ್ ಪ್ರಭಾಕರ್ ಪರಿಚಿತರು. ಅವರ ಮಗ ಇಂದು ತಮ್ಮ 25ನೇ ಸಿನಿಮಾ ಮಾಡುತ್ತಿದ್ದಾರೆ. ಇದು ತಮಾಷೆ ವಿಷಯವಲ್ಲ. ಅವರು ಇನ್ನೂ 25 ಸಿನಿಮಾಗಳನ್ನು ಮಾಡಲಿ ಎಂದು ಹಾರೈಸಿದರು.
ಉದಯೋನ್ಮುಖ ನಿರ್ಮಾಪಕ ಶ್ರೇಯಸ್ ಮಾತನಾಡಿ, ಸಿನಿಮಾ ನಿರ್ಮಿಸಬೇಕು ಎಂಬುದು ನನ್ನ ಕನಸು. ಆ ಕನಸಿಗೆ ನನ್ನ ತಂದೆ, ತಾಯಿ ಮತ್ತು ಸಹೋದರ ಶಕ್ತಿ ತುಂಬುತ್ತಿದ್ದಾರೆ. ವಿನೋದ್ ಪ್ರಭಾಕರ್ ಅವರು ನನ್ನ ಚಿತ್ರರಂಗದ ಗುರುಗಳು. ಅವರ ಸಹಕಾರದಿಂದ ನಾನು ಪದ್ಮಾವತಿ ಫಿಲಂಸ್ ಎಂಬ ಸಂಸ್ಥೆ ಹುಟ್ಟುಹಾಕಿ, ಈ ಚಿತ್ರ ನಿರ್ಮಿಸುತ್ತಿದ್ದೇನೆ ಎಂದು ತಿಳಿಸಿದರು.