ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ಹಾಗೂ ದೊಡ್ಮನೆ ಮಗ ರಾಘವೇಂದ್ರ ರಾಜ್ಕುಮಾರ್ ಆಗಸ್ಟ್ 15ರಂದು 59ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಪುತ್ರ ವಿನಯ್ ರಾಜ್ಕುಮಾರ್ ಅಭಿನಯದ 'ಪೆಪೆ' ಚಿತ್ರತಂಡ ರಾಘಣ್ಣ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದೆ. ಚಿತ್ರತಂಡವು ರಾಘವೇಂದ್ರ ರಾಜ್ಕುಮಾರ್ ಅವರಿಂದ ಕೇಕ್ ಕಟ್ ಮಾಡಿಸಿ, ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.
ಪೆಪೆ ಚಿತ್ರತಂಡದ ಜೊತೆಗೆ ಅಭಿಮಾನಿಗಳು ಕೂಡ ಸೇರಿದ್ದು, ಹುಟ್ಟುಹಬ್ಬದ ಶುಭ ಕೋರಿ, ರಾಘಣ್ಣನ ಜೊತೆಗೆ ಫೋಟೋಗಳಿಗೆ ಪೋಸ್ ಕೊಟ್ಟರು. ಕೇಕ್ ಕಟ್ ಮಾಡುವಾಗ ರಾಘಣ್ಣನ ಮಡದಿ ಮಂಗಳಾ ರಾಘವೇಂದ್ರ ರಾಜ್ಕುಮಾರ್, ಪುತ್ರರಾದ ವಿನಯ್ ರಾಜ್ಕುಮಾರ್ ಮತ್ತು ಯುವ ರಾಜ್ಕುಮಾರ್ ಇದ್ದರು.
ವಿನಯ್ ರಾಜ್ಕುಮಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಪೆಪೆ' ಮೇಲೆ ದೊಡ್ಮನೆ ಅಭಿಮಾನಿಗಳಿಗೆ ಹೆಚ್ಚಿನ ಕುತೂಹಲವಿದೆ. ಜನರನ್ನು ರಂಜಿಸಲು ಕ್ಲಾಸ್ ಆಗಿದ್ದ ವಿನಯ್ ರಾಜ್ಕುಮಾರ್ ಈ ಬಾರಿ ಮಾಸ್ ಅವತಾರವೆತ್ತಿ ಬರುತ್ತಿದ್ದಾರೆ. ಇತ್ತೀಚೆಗೆ ಆಟೋ ಸಾರಥಿಗಳಿಂದ ಸಿನಿಮಾದ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಿದ್ದ ಪೆಪೆ ತಂಡ, ನಿನ್ನೆ ರಾಘಣ್ಣನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಆಶೀರ್ವಾದ ಪಡೆದಿದೆ.