ಕನ್ನಡ ಚಿತ್ರರಂಗದಲ್ಲಿ ರೋಮಿಯೋ, ರಾಗ ಸೇರಿದಂತೆ ಕೆಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ಅವರೀಗ ಮತ್ತೊಂದು ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಇವರ ಜೊತೆ ಸ್ಯಾಂಡಲ್ವುಡ್ನ ಚಿನ್ನಾರಿಮುತ್ತ ವಿಜಯ ರಾಘವೇಂದ್ರ ಕೈ ಜೋಡಿಸಿದ್ದಾರೆ. ಚಿತ್ರದಲ್ಲಿ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಇದೊಂದು ರೈತರ ಕುರಿತಾದ ಸಿನಿಮಾವಾಗಿದೆ.
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಪಿ.ಸಿ.ಶೇಖರ್, "ಇದು ರೈತನ ಕುರಿತ ಸಿನಿಮಾ. ಬಹುತೇಕ ಚಿತ್ರೀಕರಣ ಹಳ್ಳಿಯಲ್ಲಿಯೇ ನಡೆಯಲಿದೆ. ರೈತ ಮತ್ತು ಸಾರ್ವಜನಿಕರ ನಡುವಿನ ಸಂಬಂಧದ ಜೊತೆಗೆ ದೇಶಕ್ಕೆ ರೈತನ ಮಹತ್ವವನ್ನು ತೋರಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗುವುದು. ಚಿತ್ರಕ್ಕೆ ನಾನೇ ಕಥೆ, ಚಿತ್ರಕಥೆ ಬರೆದಿದ್ದೇನೆ. ಕಥೆ ಬರೆಯುವಾಗ ವಿಜಯ್ ರಾಘವೇಂದ್ರರನ್ನು ಗಮನದಲ್ಲಿಟ್ಟುಕೊಂಡು ಕಥೆ ಬರೆದಿದ್ದೆ. ಅವರಿಗೆ ಕಥೆ ಹೇಳಿದಾಗ ಅವರು ಇಷ್ಟಪಟ್ಟು ನಟಿಸಲು ಒಪ್ಪಿಕೊಂಡಿದ್ದು, ತುಂಬಾ ಖುಷಿ ತಂದಿದೆ. ಅದ್ದೂರಿ ತಾರಾಗಣ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ನಮ್ಮ ತಂಡ ಹೊಂದಿದೆ. ಇಷ್ಟು ವರ್ಷಗಳ ನನ್ನ ಸಿನಿ ಪಯಣದಲ್ಲಿ ಇದೊಂದು ವಿಭಿನ್ನ ಶೈಲಿಯ ಸಿನಿಮಾ. ನನ್ನ ಹೃದಯಕ್ಕೆ ಹತ್ತಿರವಾದ ಚಿತ್ರವಾಗಿದ್ದು, ತುಂಬಾ ಪ್ರೀತಿಯಿಂದ ಮಾಡುತ್ತಿದ್ದೇನೆ" ಎಂದು ತಿಳಿಸಿದರು.
ಬಳಿಕ ನಟ ವಿಜಯ್ ರಾಘವೇಂದ್ರ ಮಾತನಾಡಿ, "ನಿರ್ದೇಶಕ ಪಿ.ಸಿ.ಶೇಖರ್ ಬಂದು ಕಥೆ ಹೇಳಿದಾಗ ತುಂಬಾ ಖುಷಿಯಾಯಿತು. ಅನ್ನದಾತ ರೈತನ ಕುರಿತಾದ ಈ ಚಿತ್ರದ ನಾಯಕನನ್ನಾಗಿ ಆಯ್ಕೆ ಮಾಡಿದ ನಿರ್ದೇಶಕ ಪಿ.ಸಿ.ಶೇಖರ್ ಹಾಗೂ ನಿರ್ಮಾಪಕ ಪ್ರಕಾಶ್ ಸಿದ್ದಪ್ಪ ಅವರಿಗೆ ಧನ್ಯವಾದಗಳು. ಪಿ.ಸಿ.ಶೇಖರ್ ನಿರ್ದೇಶನದ ನನ್ನ ಮೊದಲ ಸಿನಿಮಾ ಇದು" ಎಂದು ತಿಳಿಸಿದರು.