ಬ್ಲಾಕ್ಬಸ್ಟರ್ ಕೆಜಿಎಫ್ ಹಾಗೂ ಕಾಂತಾರ ಸಿನಿಮಾಗಳ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಕನ್ನಡದ ಚಲನಚಿತ್ರ ನಿರ್ಮಾಣ ಸಂಸ್ಥೆ 'ಹೊಂಬಾಳೆ ಫಿಲ್ಮ್'. ಈ ಸಂಸ್ಥೆಯಿಂದ ನಿರ್ಮಾಣವಾದ ಕೆಜಿಎಫ್ 2 ಹಾಗೂ ಕಾಂತಾರ ಸಿನಿಮಾಗಳಿಗೆ 70ನೇ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಕಾಂತಾರಗೆ ಎರಡು ಪ್ರಶಸ್ತಿಗಳು ಹಾಗೂ ಕೆಜಿಎಫ್ 2 ಚಿತ್ರಕ್ಕೆ ಎರಡು ಪ್ರಶಸ್ತಿಗಳು ಸಿಕ್ಕಿರೋದು ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಸಂತಸಕ್ಕೆ ಕಾರಣವಾಗಿದೆ. ಈ ಸಂಭ್ರಮವನ್ನು ವಿಜಯ್ ಕಿರಗಂದೂರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ವರಮಹಾಲಕ್ಷ್ಮೀ ಹಬ್ಬದಂದೇ ಪ್ರಶಸ್ತಿ ಬಂದಿರುವುದು ಖುಷಿ ನೀಡಿದೆ: ನಾಲ್ಕು ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿಗಳನ್ನು ಕರುನಾಡ ಜನತೆ ಹಾಗೂ ಕನ್ನಡ ಚಿತ್ರರಂಗಕ್ಕೆ ಅರ್ಪಿಸುತ್ತೇನೆ. ಚಿತ್ರದ ನಟ-ನಟಿಯರಿಂದ ಹಿಡಿದು ಪ್ರತಿಯೊಬ್ಬ ತಂತ್ರಜ್ಞರ ಪರಿಶ್ರಮದಿಂದ ನಮ್ಮ ಸಿನಿಮಾಗಳಿಗೆ ಪ್ರಶಸ್ತಿ ಒದಗಿ ಬಂದಿದೆ. ವರಮಹಾಲಕ್ಷ್ಮೀ ಹಬ್ಬದ ದಿನದಂದು ನಮ್ಮ ಸಂಸ್ಥೆಯಿಂದ ನಿರ್ಮಾಣ ಮಾಡಿರೋ ಕೆಜಿಎಫ್ 2 ಪ್ರಾದೇಶಿಕ ವಿಭಾಗ ಹಾಗೂ ಬೆಸ್ಟ್ ಆ್ಯಕ್ಷನ್ ಸಿನಿಮಾ ವಿಭಾಗದಲ್ಲಿ ಮತ್ತು ಕಾಂತಾರಗೆ ಬೆಸ್ಟ್ ಆ್ಯಕ್ಟರ್ ಹಾಗೂ ಅತ್ಯುತ್ತಮ ಮನರಂಜನಾ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಬಂದಿರೋದು ಬಹಳ ಖುಷಿಯಾಗಿದೆ. ಜೊತೆಗೆ, ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಒಳ್ಳೆಯ ಸಿನಿಮಾಗಳನ್ನು ಮಾಡಲು ನಮಗೆ ಪ್ರೋತ್ಸಾಹ ಸಿಕ್ಕಿದೆ. ಇದು ನಮಗೆ ಮತ್ತಷ್ಟು ಸ್ಫೂರ್ತಿ ತುಂಬುವಂತೆ ಮಾಡಿದೆ ಎಂದು ತಿಳಿಸಿದರು.
ಮರಾಠಿ, ಹಿಂದಿ, ಮಲಯಾಳಂ ಚಿತ್ರಗಳ ಮಟ್ಟಿಗೆ ಇಂದು ಕನ್ನಡ ಚಿತ್ರಗಳಿಗೂ ಬೇಡಿಕೆ ಬಂದಿದೆ. ಇದರಿಂದ ನಮ್ಮ ಜವಾಬ್ದಾರಿ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಒಳ್ಳೊಳ್ಳೆ ಸಿನಿಮಾಗಳನ್ನು ಮಾಡುವ ಹೊಣೆ ನಮ್ಮ ಮೇಲಿದೆ ಎಂದು ಹೇಳಿದರು.
ಮೊದಲು ಕಾಂತಾರ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ ಬರುತ್ತದೆ ಎಂದುಕೊಂಡಿರಲಿಲ್ಲ. ಆದರೆ ಕಾಂತಾರ ಸಿನಿಮಾದ ಕ್ಲೈಮಾಕ್ಸ್ ನೋಡಿದಾಗ ಪ್ರಶಸ್ತಿಗಳು ಸಿಗುತ್ತದೆ ಅಂದುಕೊಂಡಿದ್ವಿ. ಆದರೆ ನ್ಯಾಷನಲ್ ಅವಾರ್ಡ್ ಬರುತ್ತದೆ ಎಂದುಕೊಂಡಿರಲಿಲ್ಲ ಎಂದರು.