ವಿಜಯ್ ದೇವರಕೊಂಡ ಹಾಗೂ ಮೃಣಾಲ್ ಠಾಕೂರ್ ಅಭಿನಯದ ರೊಮ್ಯಾಂಟಿಕ್ ಡ್ರಾಮಾ 'ಫ್ಯಾಮಿಲಿ ಸ್ಟಾರ್' ಶುಕ್ರವಾರ ತೆರೆಗಪ್ಪಳಿಸಿ, ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತು. ಬಹುತೇಕ ಮೆಚ್ಚುಗೆಯನ್ನೇ ಪಡೆದುಕೊಂಡಿರುವ ಈ ಸಿನಿಮಾ ಸಾಧಾರಣ ಅಂಕಿ-ಅಂಶಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಆರಂಭಿಸಿದೆ.
ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಚಿತ್ರ ತನ್ನ ಮೊದಲ ದಿನದಂದು ಭಾರತದಾದ್ಯಂತ 5.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸೌತ್ ಸೂಪರ್ ಸ್ಟಾರ್ ವಿಜಯ್ ಅವರ ಇತ್ತೀಚಿನ ಚಿತ್ರಗಳಿಗೆ ಹೋಲಿಸಿದರೆ ಈ ಸಿನಿಮಾದ ಮೊದಲ ದಿನದ ಅಂಕಿ ಅಂಶ ಕುಸಿತ ಕಂಡಿದೆ. ಇತ್ತೀಚಿನ ವರ್ಷಗಳಲ್ಲಿ ಮೊದಲ ದಿನವೇ ಅತಿ ಕಡಿಮೆ ಕಲೆಕ್ಷನ್ ಮಾಡಿರುವ ಚಿತ್ರಗಳಲ್ಲಿ ಇದು ಒಂದಾಗಿದೆ.
ಸಿನಿಮಾ ಬಿಡುಗಡೆಗೂ ಮೊದಲು ಓರ್ಮ್ಯಾಕ್ಸ್ ಮೀಡಿಯಾ, 'ಫ್ಯಾಮಿಲಿ ಸ್ಟಾರ್' ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಸರಿಸುಮಾರು 10.5 ಕೋಟಿ ರೂ. ಗಳಿಸುತ್ತದೆ ಎಂದು ಅಂದಾಜಿಸಿತ್ತು. ಅದಾಗ್ಯೂ, ನಿರೀಕ್ಷೆಗಳು ಹುಸಿಯಾಗಿವೆ. ಸಿದ್ದು ಜೊನ್ನಲಗಡ್ಡ ಅವರ ಕಾಮಿಡಿ ಡ್ರಾಮಾ 'ಟಿಲ್ಲು ಸ್ಕ್ವೇರ್' ಜೊತೆ ಕಠಿಣ ಸ್ಪರ್ಧೆ ಎದುರಿಸುತ್ತಿದೆ. ಈಗಾಗಲೇ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿರುವ 'ಟಿಲ್ಲು ಸ್ಕ್ವೇರ್' ಜಾಗತಿಕವಾಗಿ 100 ಕೋಟಿ ರೂಪಾಯಿ ಮೀರುವ ನಿರೀಕ್ಷೆ ಇದೆ.
ವಿಜಯ್ ದೇವರಕೊಂಡ ಅವರ ಹಿಂದಿನ ಬಿಡುಗಡೆಗಳಾದ ಕುಶಿ, ಲೈಗರ್, ಡಿಯರ್ ಕಾಮ್ರೆಡ್, ವರ್ಲ್ಡ್ ಫೇಮಸ್ ಲವರ್ ಚಿತ್ರಗಳು ಅತ್ಯುತ್ತಮ ಅಂಕಿ ಅಂಶಗಳೊಂದಿಗೆ ಆರಂಭ ಕಂಡವು. ಮೂರು ಚಿತ್ರಗಳ ಕಲೆಕ್ಷನ್ ಸಂಖ್ಯೆ ಎರಡಂಕಿ (ಕೋಟಿ ಲೆಕ್ಕದಲ್ಲಿ)ಯಲ್ಲಿದ್ದವು. ಅವುಗಳಿಗೆ ಹೋಲಿಸಿದರೆ, 'ಫ್ಯಾಮಿಲಿ ಸ್ಟಾರ್' ಸಿನಿಮಾಗೆ ಕೊಂಚ ಹಿನ್ನೆಡೆಯಾಗಿದೆ.