ಬಾಲಿವುಡ್ನ ಬೇಡಿಕೆಯ ಮತ್ತು ಪ್ರತಿಭಾನ್ವಿತ ನಟ ವಿಕ್ಕಿ ಕೌಶಲ್ ಮುಖ್ಯಭೂಮಿಕೆಯ 'ಬ್ಯಾಡ್ ನ್ಯೂಸ್' ಕಳೆದ ದಿನ ತೆರೆಕಂಡು ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ಆನಂದ್ ತಿವಾರಿ ನಿರ್ದೇಶನದ ಈ ಚಿತ್ರ ಬಹುತೇಕ ಮೆಚ್ಚುಗೆ ಸ್ವೀಕರಿಸಿದ್ದು, ಬಾಕ್ಸ್ ಆಫೀಸ್ ಪ್ರಯಾಣ ಉತ್ತಮವಾಗಿದೆ.
ಬ್ಯಾಡ್ ನ್ಯೂಸ್ ತೆರೆಕಂಡ ಮೊದಲ ದಿನ ಸರಿಸುಮಾರು 9 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ಚಿತ್ರದ ನಿರ್ಮಾಪಕರು ತಿಳಿಸಿದ್ದಾರೆ ಎಂದು ವರದಿಗಳು ಸೂಚಿಸಿವೆ. ಆನಂದ್ ತಿವಾರಿ, ಹಿರೂ ಯಶ್ ಜೋಹರ್, ಕರಣ್ ಜೋಹರ್, ಅಪೂರ್ವ ಮೆಹ್ತಾ ಮತ್ತು ಅಮೃತಪಾಲ್ ಸಿಂಗ್ ಬಿಂದ್ರಾ ಅವರ ಸಹ - ನಿರ್ಮಾಣವಿರುವ ಈ ಚಿತ್ರದ ವಾರಾಂತ್ಯದ ಗಳಿಕೆ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
ಬಾಲಿವುಡ್ನ ಖ್ಯಾತ ಚಲನಚಿತ್ರ ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್, ಸಿನಿಮಾದ ಮೊದಲ ದಿನದ ಕಲೆಕ್ಷನ್ ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ. "ಅಭಿನಂದನೆಗಳು, ಮೊದಲ ದಿನವೇ ಬ್ಯಾಡ್ ನ್ಯೂಸ್ ಎಲ್ಲರ ಮನ ಗೆದ್ದಿದೆ" ಎಂದು ಬರೆದುಕೊಂಡಿದ್ದಾರೆ. ಪೋಸ್ಟರ್ ಜೊತೆಗೆ, 8.62 ಕೋಟಿ ರೂ. ಕಲೆಕ್ಷನ್ (Net collection) ಆಗಿದೆ ಎಂದು ಚಲನಚಿತ್ರ ನಿರ್ಮಾಣ ಸಂಸ್ಥೆ ಘೋಷಿಸಿದೆ.
ಚಿತ್ರವೊಂದರ ಗಳಿಕೆಯ ಈ ಅಂಕಿ - ಅಂಶ ಗಮನಾರ್ಹ. ಇತ್ತೀಚೆಗೆ, ಆರಂಭಿಕ ದಿನದಂದು ಈ ಅಂಕಿ - ಅಂಶವನ್ನು ಮೀರಿದ ಕೊನೆಯ ಬಾಲಿವುಡ್ ಚಿತ್ರವೆಂದರೆ 'ಬಡೇ ಮಿಯಾನ್ ಚೋಟೆ ಮಿಯಾನ್'. ಈ ಸಿನಿಮಾ 16 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಅದಾಗ್ಯೂ ಶೀಘ್ರದಲ್ಲೇ ಕಲೆಕ್ಷನ್ ಕುಸಿಯಿತು.