ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಯಶ್, ಪವರ್ ಸ್ಟಾರ್ ದಿ.ಪುನೀತ್ ರಾಜ್ಕುಮಾರ್ ಅವರಂತಹ ಸ್ಟಾರ್ ನಟರ ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡವರು ಪವನ್ ಒಡೆಯರ್. ನಿರ್ದೇಶನದಲ್ಲಿ ಗೆದ್ದಿರುವ ಪವನ್ ನಿರ್ಮಾಪಕರಾಗಿಯೂ ಮೊದಲ ಹೆಜ್ಜೆಯಲ್ಲೇ ಯಶ ಕಂಡವರು. 'ಡೊಳ್ಳು' ಸಿನಿಮಾ ಮೂಲಕ ನಿರ್ಮಾಣಕ್ಕಿಳಿದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ ಪವನ್ ಒಡೆಯರ್ ಮತ್ತೊಮ್ಮೆ ಸಾಗರ್ ಪುರಾಣಿಕ್ ಜೊತೆ ಕೈ ಜೋಡಿಸಿರುವುದು ಗೊತ್ತೇ ಇದೆ.
'ವೆಂಕ್ಯಾ' ಮುಹೂರ್ತ ಸಮಾರಂಭ: 'ಡೊಳ್ಳು' ಸಾರಥಿ ಸಾಗರ್ ಪುರಾಣಿಕ್ ಮತ್ತು ಪವನ್ ಒಡೆಯರ್ ಕಾಂಬಿನೇಶನ್ನ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಇತ್ತೀಚೆಗೆ ಮುಹೂರ್ತ ನೆರವೇರಿದೆ. ಚಿತ್ರಕ್ಕೆ 'ವೆಂಕ್ಯಾ' ಎಂಬ ಶೀರ್ಷಿಕೆ ಇಡಲಾಗಿದೆ. 'ವೆಂಕ್ಯಾ'ನಿಗೆ ಸಾಗರ್ ಪುರಾಣಿಕ್ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ನಾಯಕನಾಗಿಯೂ ಮೊದಲ ಹೆಜ್ಜೆ ಇಟ್ಟಿದ್ದಾರೆ. ಹೌದು, ಇಲ್ಲಿ ನಿರ್ದೇಶನದ ಜೊತೆಗೆ ಸಾಗರ್ ನಟನೆಯ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ.
ಉತ್ತರ ಕರ್ನಾಟಕದ ಕಥೆ: 'ವೆಂಕ್ಯಾ' ಶೂಟಿಂಗ್ ಈಗಾಗಲೇ ಶುರುವಾಗಿದೆ. ಇದೊಂದು ವಿಭಿನ್ನ ಪ್ರಯತ್ನ. ಉತ್ತರ ಕರ್ನಾಟಕದ ಕಥೆಯಾದರೂ ಅದು ದೇಶ ಸುತ್ತುತ್ತದೆ. ನಮ್ಮದು ಹೊಸ ಬಗೆಯ ಕಮರ್ಷಿಯಲ್ ಸಿನಿಮಾ ಅಂತಿದೆ ಚಿತ್ರತಂಡ. ಶೀಘ್ರದಲ್ಲೇ ಉಳಿದ ತಾರಾ ಬಳಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಚಿತ್ರತಂಡದ ಮಾಹಿತಿ ಸಿಗಲಿದೆ. ಅಪೇಕ್ಷಾ ಒಡೆಯರ್ ಮತ್ತು ಪವನ್ ಒಡೆಯರ್ ಹಣ ಹೂಡುತ್ತಿರುವ 'ವೆಂಕ್ಯಾ'ಗೆ ಸ್ನೇಹಿತರಾದ ಅವಿನಾಶ್ ವಿ.ರೈ ಮತ್ತು ಮೋಹನ್ ಲಾಲ್ ಮೆನನ್ ಅವರ ಸಹ ನಿರ್ಮಾಣವಿರಲಿದೆ.