ಕರ್ನಾಟಕ

karnataka

ETV Bharat / entertainment

ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ವಸಿಷ್ಠ ಸಿಂಹ: ಭೀಮನ ಮೊಮ್ಮಗನ ಕಥೆ 'ಬಾರ್ಬರಿಕ್'​​ - TRIBANADHARI BARBARIK

'ಬಾರ್ಬರಿಕ್'​ ಎಂಬ ಪ್ಯಾನ್ ಇಂಡಿಯಾ ಚಿತ್ರದ ಮುಖ್ಯಪಾತ್ರದಲ್ಲಿ ವಸಿಷ್ಠ ಸಿಂಹ ಕಾಣಿಸಿಕೊಳ್ಳಲಿದ್ದಾರೆ.

Vasishta Simha in Tribanadhari Barbarik
'ಬಾರ್ಬರಿಕ್'​​ ಸಿನಿಮಾದಲ್ಲಿ ವಸಿಷ್ಠ ಸಿಂಹ (Film Poster, ETV Bharat)

By ETV Bharat Entertainment Team

Published : Nov 12, 2024, 2:06 PM IST

ಇತ್ತೀಚಿನ ದಿನಗಳಲ್ಲಿ ಹೊಸ ಆಲೋಚನೆಯ ಪ್ರತಿಭಾನ್ವಿತ ನಿರ್ದೇಶಕರು ವಿಭಿನ್ನ ಮತ್ತು ವೈವಿಧ್ಯಮಯ ಕಥೆಗಳಿಂದ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ. ಕಂಟೆಂಟ್‍ ಆಧರಿತ ಚಿತ್ರಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ವಾನರ ಸೆಲ್ಯುಲಾಯ್ಡ್ ಎಂಬ ಹೊಸ ನಿರ್ಮಾಣ ಸಂಸ್ಥೆ ಹೆಜ್ಜೆ ಇಟ್ಟಿದೆ. ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡುವ ಉದ್ದೇಶದಿಂದ ಈ ಸಂಸ್ಥೆ ಹುಟ್ಟಿಕೊಂಡಿದ್ದು, ಒಂದಿಷ್ಟು ವೈವಿಧ್ಯಮಯ ಚಿತ್ರಗಳನ್ನು ನಿರ್ಮಿಸಲು ಮುಂದಾಗಿದೆ.

ಇದರ ಮೊದಲ ಹಂತವಾಗಿ, ತ್ರಿಬಾಣಧಾರಿ 'ಬಾರ್ಬರಿಕ್'​ ಸಿನಿಮಾ ರೂಪುಗೊಳ್ಳುತ್ತಿದೆ. ಈ ಚಿತ್ರವನ್ನು ವಿಜಯಪಾಲ್‍ ರೆಡ್ಡಿ ಅಡಿಧಲ ನಿರ್ಮಿಸಿದರೆ, ಮೋಹನ್‍ ಶ್ರೀವತ್ಸ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಖ್ಯಾತ ನಿರ್ದೇಶಕ ಮಾರುತಿ ಚಿತ್ರವನ್ನು ಪ್ರೆಸೆಂಟ್​ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಚಿತ್ರದ ಮುಖ್ಯಪಾತ್ರದಲ್ಲಿ ವಸಿಷ್ಠ ಸಿಂಹ ಕಾಣಿಸಿಕೊಳ್ಳಲಿದ್ದಾರೆ.

ಕಂಚಿನ ಕಂಠದಿಂದ ಸಿನಿಮಾರಂಗಲ್ಲಿ ಗುರುತಿಸಿಕೊಂಡಿರುವ ವಸಿಷ್ಠ ಸಿಂಹ ಕನ್ನಡ, ತೆಲುಗು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ತ್ರಿಬಾಣಧಾರಿ ಬಾರ್ಬರಿಕ್ ಚಿತ್ರದ ಮೋಷನ್‍ ಪೋಸ್ಟರ್ ಬಿಡುಗಡೆಯಾಗಿದ್ದು, ಇದರ ಮೂಲಕ ಚಿತ್ರದ ಕಥಾವಸ್ತುವನ್ನು ಪರಿಚಯಿಸಲಾಗಿದೆ. ಪೌರಾಣಿಕ ಮತ್ತು ಸಾಮಾಜಿಕ ಅಂಶಗಳು ಬೆರೆತಿರುವ ಕಥೆ ಇದಾಗಿದೆ. ಭೀಮನ ಮೊಮ್ಮಗ (ಘಟೋತ್ಕಚನ ಮಗ) ಬಾರ್ಬರಿಕನ ಕಥೆಯನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ನಡೆಯುತ್ತಿದೆ. ಮೂರು ಬಾಣಗಳನ್ನು ಏಕಕಾಲಕ್ಕೆ ಹೂಡುವ ಬಾರ್ಬರಿಕನ ಅದ್ಭುತ ಪರಾಕ್ರಮವನ್ನು ಈ ಮೋಷನ್‍ ಪೋಸ್ಟರ್​ನಲ್ಲಿ ವಿವರಿಸಲಾಗಿದೆ. ಈ ಜಗತ್ತು ಗಮನಿಸದ ಒಬ್ಬ ಮಹಾವೀರನ ಕಥೆ ಇದು ಎಂದು ಈ ಪೋಸ್ಟರ್​ನಲ್ಲಿ ಬಣ್ಣಿಸಲಾಗಿದೆ.

ಒಂದೆಡೆ ಪೌರಾಣಿಕ ಕಥೆ ಹೇಳುತ್ತಲೇ, ಇನ್ನೊಂದು ಕಡೆ ಆಧುನಿಕ ಸ್ಪರ್ಶವನ್ನೂ ನೀಡಲಾಗಿದೆ. ಗಾಂಢೀವಧಾರಿ ಅರ್ಜುನ, ಪಾಶುಪತಾಸ್ತ್ರಂ, ಬ್ರಹ್ಮಾಸ್ತ್ರಂ, ಗರುಡ ಪುರಾಣಂ ಮುಂತಾದ ಪುಸ್ತಕಗಳ ಜೊತೆಗೆ ಗನ್‍ ಸಹ ತೋರಿಸಲಾಗಿದೆ. ಈ ಪೌರಾಣಿಕ ಮತ್ತು ಸಮಕಾಲೀನ ವಿಷಯಗಳನ್ನು ವಸಿಷ್ಠ ಸಿಂಹ ತಮ್ಮ ಧ್ವನಿಯಲ್ಲಿ ಹೇಳಿದ್ದಾರೆ. ಇನ್ಫ್ಯೂಷನ್‍ ಬ್ಯಾಂಡ್‍ ಎಂಬ ಸಂಗೀತ ತಂಡ ಸಂಗೀತ ಸಂಯೋಜಿಸುತ್ತಿದೆ.

ಇದನ್ನೂ ಓದಿ:ಧರ್ಮ- ಅನುಷಾ ನಡುವೆ ಹುಳಿ ಹಿಂಡಿದ ನಾಮಿನೇಷನ್: ಅಸಲಿ ಆಟ ಶುರು ಮಾಡಿದ ಬಿಗ್​ ಬಾಸ್​​

ತ್ರಿಬಾಣಧಾರಿ ಬಾರ್ಬರಿಕ್ ಚಿತ್ರದಲ್ಲಿ ಸತ್ಯರಾಜ್‍, ಸಂಚಿ ರೈ, ಸತ್ಯಂ ರಾಜೇಶ್‍, ಕ್ರಾಮತಿ ಕಿರಣ್‍, ಮೊಟ್ಟ ರಾಜೇಂದ್ರ, ವಿ.ಟಿ.ವಿ.ಗಣೇಶ್‍, ಉದಯಭಾನು ಸೇರಿದಂತೆ ಮೊದಲಾದವರು ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಕುಶೇಂದರ್ ರಮೇಶ್‍ ರೆಡ್ಡಿ ಛಾಯಾಗ್ರಹಣ ನಿರ್ವಹಿಸಿದರೆ, ಮಾರ್ತಾಂಡ ವೆಂಕಟೇಶ್‍ ಸಂಕಲನ ಮತ್ತು ಶ್ರೀನಿವಾಸ್ ಪನ್ನ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ರಾಮ್‍ ಶಂಕರ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ:ಶಾರುಖ್ ಖಾನ್‌ಗೆ ಜೀವ ಬೆದರಿಕೆ: ಛತ್ತೀಸ್‌ಗಢದ ವಕೀಲ ಅರೆಸ್ಟ್

ಸಿನಿಮಾದ ಚಿತ್ರೀಕರಣ ಮುಗಿದು ಸದ್ಯ ಪೋಸ್ಟ್ ಪ್ರೊಡಕ್ಷನ್‍ ಹಂತದಲ್ಲಿದೆ. ಪ್ರಸ್ತುತ ತನ್ನ ಪೋಸ್ಟರ್ ಮೂಲಕವೇ ಪ್ರೇಕ್ಷಕ ವಲಯದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದು, ಈ ಚಿತ್ರವು ಪ್ಯಾನ್‍ ಇಂಡಿಯಾ ಮಟ್ಟದಲ್ಲಿ ಅಂದರೆ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ABOUT THE AUTHOR

...view details