ಬಹುನಿರೀಕ್ಷಿತ 'ಬಾರ್ಡರ್ 2' ಚಿತ್ರದ ನಿರ್ಮಾಪಕರಿಂದು ಸೆಟ್‌ನಿಂದ ತೆರೆಮರೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಚಿತ್ರದ ಕಲಾವಿದರು ಮತ್ತು ಸಿಬ್ಬಂದಿ ಕೆಲ ಆ್ಯಕ್ಷನ್-ಪ್ಯಾಕ್ಡ್ ದೃಶ್ಯಗಳನ್ನು ಚಿತ್ರೀಕರಿಸಲು ಉತ್ತರ ಪ್ರದೇಶದ ಝಾನ್ಸಿಯಲ್ಲಿದ್ದಾರೆ. ಆನ್‌ಲೈನ್‌ನಲ್ಲಿ ಶೇರ್ ಆಗಿರೋ ಫೋಟೋ ಅಭಿಮಾನಿಗಳ ಗಮನ ಸೆಳೆದಿದೆ.
ಟಿ-ಸೀರೀಸ್‌ನ ಎಕ್ಸ್ ಖಾತೆಯಲ್ಲಿ, ಸನ್ನಿ ಡಿಯೋಲ್, ವರುಣ್ ಧವನ್, ನಿರ್ಮಾಪಕರಾದ ಭೂಷಣ್ ಕುಮಾರ್, ನಿಧಿ ದತ್ತಾ, ಸಹ-ನಿರ್ಮಾಪಕ ಶಿವ್ ಚನಾನ್, ಬಿನೋಯ್ ಗಾಂಧಿ ಮತ್ತು ನಿರ್ದೇಶಕ ಅನುರಾಗ್ ಸಿಂಗ್ ಅವರನ್ನು ಒಳಗೊಂಡ ತೆರೆಮರೆಯ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಚಿತ್ರತಂಡ ಟ್ಯಾಂಕರ್ ಎದುರು ನಿಂತಿರುವುದನ್ನು ಕಾಣಬಹುದು. ಸನ್ನಿ ಡಿಯೋಲ್ ಮತ್ತು ವರುಣ್ ಧವನ್ ಟ್ಯಾಂಕರ್ ಮೇಲೆ ಕುಳಿತು ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.
ಫೋಟೋ ಹಂಚಿಕೊಂಡ ಚಿತ್ರ ತಯಾರಕರು, "ಸಾಹಸ, ಪರಂಪರೆ ಮತ್ತು ದೇಶಭಕ್ತಿ! ಝಾನ್ಸಿಯ ಕಂಟೋನ್ಮೆಂಟ್‌ನಲ್ಲಿನ ಬಾರ್ಡರ್ 2 ಸೆಟ್‌ನಲ್ಲಿ ಸನ್ನಿ ಡಿಯೋಲ್, ವರುಣ್ ಧವನ್, ನಿರ್ಮಾಪಕ ಭೂಷಣ್ ಕುಮಾರ್, ನಿಧಿ ದತ್ತಾ, ಸಹ-ನಿರ್ಮಾಪಕ ಶಿವ್ ಚನಾನ್, ಬಿನೋಯ್ ಗಾಂಧಿ, ನಿರ್ದೇಶಕ ಅನುರಾಗ್ ಸಿಂಗ್. 2026ರ ಜನವರಿ 23ಕ್ಕೆ ಶೌರ್ಯ ಮತ್ತು ತ್ಯಾಗದ ಕಥೆಗೆ ಸಜ್ಜಾಗೋಣ" ಎಂದು ಬರೆದುಕೊಂಡಿದ್ದಾರೆ.
ಶೂಟಿಂಗ್ ಸೆಟ್ನ ಮತ್ತೊಂದು ಫೋಟೋವನ್ನು ನಟ ವರುಣ್ ಧವನ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ, ಕೇವಲ ವರುಣ್ ಮತ್ತು ಸನ್ನಿ ಡಿಯೋಲ್ ಟ್ಯಾಂಕರ್ ಮೇಲೆ ಕುಳಿತಿರುವುದನ್ನು ಕಾಣಬಹುದು. ಪೋಸ್ಟ್ಗೆ, "ಸನ್ನಿ ಡೇಸ್, ಹಮಾರಾ ಸಾಬ್ ಜಿ, ಬಾರ್ಡರ್ 2, 2026ರ ಜನವರಿಗೆ ಬಿಡುಗಡೆ'' ಎಂದು ಬರೆದುಕೊಂಡಿದ್ದಾರೆ.