ಭಾರತೀಯ ಚಿತ್ರರಂಗದ ಖ್ಯಾತ ನಟ ಮಿಥುನ್ ಚಕ್ರವರ್ತಿ ಮತ್ತು ಹಿರಿಯ, ಹೆಸರಾಂತ ಗಾಯಕಿ ಉಷಾ ಉತ್ತುಪ್ ಅವರಿಗೆ ಪದ್ಮಭೂಷಣ ಗೌರವ ಸಲ್ಲಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ನವದೆಹಲಿಯಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಹಿರಿಯ ಗಾಯಕಿ ಪದ್ಮಭೂಷಣ ಪ್ರಶಸ್ತಿ ಪಡೆದ ನಂತರ ತಮ್ಮ ಸಂತೋಷವನ್ನು ಹಂಚಿಕೊಂಡರು. ಹಿರಿಯ ನಟ ಮಿಥುನ್ ಚಕ್ರವರ್ತಿ, ಭಾರತೀಯ ಚಿತ್ರರಂಗಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಹಿರಿಯ ಗಾಯಕಿ ಉಷಾ ಉತ್ತುಪ್, "ನನಗೆ ಬಹಳ ಸಂತೋಷವಾಗಿದೆ. ಸಂತಸದ ಕ್ಷಣದಲ್ಲಿ ತೇಲುತ್ತಿದ್ದೇನೆ. ನನ್ನ ಕಣ್ಣಲ್ಲಿ ನೀರಿದೆ, ನೀವೆಲ್ಲರೂ ನೋಡಬಹುದು. ನನ್ನ ಜೀವನದಲ್ಲಿದು ದೊಡ್ಡ ಕ್ಷಣವಾಗಿದೆ. ದೇಶದಿಂದ ಮತ್ತು ಸರ್ಕಾರದಿಂದ ಗುರುತಿಸಲ್ಪಲ್ಪಟ್ಟ ಮಹತ್ವದ ಕ್ಷಣ. ಇದಕ್ಕಿಂತ ಇನ್ನೇನು ಕೇಳಬಹುದು? ಎಂದು ತಿಳಿಸಿದ್ದಾರೆ.
ಉಷಾ ಉತ್ತುಪ್ ತಮ್ಮ ಐದು ದಶಕಗಳ ವೃತ್ತಿಜೀವನದಲ್ಲಿ, ರಂಬಾ ಹೋ ಹೋ, ಹರಿ ಓಂ ಹರಿ, ಕೋಯಿ ಯಹಾ ಆಹಾ, ಒನ್ ಟು ಚಾ ಚಾ ಚಾ ಮತ್ತು ಡಾರ್ಲಿಂಗ್ ಸೇರಿದಂತೆ ಹಲವು ಹಿಟ್ ಸಾಂಗ್ಸ್ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದ್ದಾರೆ. ವಿಶಿಷ್ಟ ಮತ್ತು ಪವರ್ ಫುಲ್ ವಾಯ್ಸ್ ಮೂಲಕ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಭದ್ರ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಮತ್ತೊಂದೆಡೆ ಅಮೋಘ ಅಭಿನಯದ ಮೂಲಕ ಸಿನಿಪ್ರಿಯರ ಮನ ಗೆದ್ದಿರುವ ಮಿಥುನ್ ಚಕ್ರವರ್ತಿ ಕೂಡ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದು, ಸರ್ವರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. "ಬಹಳ ಸಂತೋಷವಾಗಿದೆ. ನಾನು ನನ್ನ ಜೀವನದಲ್ಲಿ ನನಗಾಗಿ ಯಾರಿಂದಲೂ ಏನನ್ನೂ ಕೇಳಿಲ್ಲ. ಇದೀಗ ಅತ್ಯುನ್ನತ ಗೌರವ ಸ್ವೀಕರಿಸಿದ್ದು, ನನಗೆ ತುಂಬಾನೇ ಸಂತೋಷವಾಗಿದೆ. ಅತ್ಯಂತ ಸಂತೋಷಕರ ಕ್ಷಣ" ಎಂದು ತಿಳಿಸಿದರು.