ಈ ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಪ್ರತಿಭೆ, ಶ್ರಮ, ಶ್ರದ್ಧೆ ಜೊತೆಗೆ ಅದೃಷ್ಟ ಇದ್ದರೆ ಸೂಪರ್ ಸ್ಟಾರ್ ಆಗೋದ್ರಲ್ಲಿ ಸಂದೇಹವೇ ಇಲ್ಲ. ಈ ಮಾತನ್ನು ಈಗ ಹಾಸ್ಯನಟ ಚಿಕ್ಕಣ್ಣ ಸಾಬೀತುಪಡಿಸಿದ್ದಾರೆ. ಹಾಸ್ಯನಟನಾಗಿ ಕನ್ನಡದ ಬಹುತೇಕ ಸೂಪರ್ ಸ್ಟಾರ್ಗಳ ಜೊತೆ ಅಭಿನಯಿಸಿದ್ದ ಚಿಕ್ಕಣ್ಣ 'ಉಪಾಧ್ಯಕ್ಷ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಹೊರಹೊಮ್ಮಿರೋದು ನಿಮಗೆ ಗೊತ್ತೇ ಇದೆ.
ಉಪಾಧ್ಯಕ್ಷ ಸಿನಿಮಾ ಬಿಡುಗಡೆ ಆದ ಎಲ್ಲ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುವ ಮೂಲಕ ಚೊಚ್ಚಲ ಚಿತ್ರದಲ್ಲೇ ಚಿಕ್ಕಣ್ಣ ಭರವಸೆ ಮೂಡಿಸಿದ್ದಾರೆ. ದಿಲ್ ವಾಲಾ, ರ್ಯಾಂಬೋ ಚಿತ್ರಗಳ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನ ಮಾಡಿರೋ ಉಪಾಧ್ಯಕ್ಷ ಚಿತ್ರಕ್ಕೆ ರಾಜ್ಯಾದ್ಯಂತ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗುತ್ತಿದೆ. ಚಿತ್ರದ ಯಶಸ್ಸಿಗೆ ಕಾರಣ ರಾಜ್ಯಾದ್ಯಂತ ಪ್ರೇಕ್ಷಕರು ತೋರಿಸುತ್ತಿರುವ ಪ್ರೀತಿ. ಇದೀಗ ಇಡೀ ಉಪಾಧ್ಯಕ್ಷ ಚಿತ್ರತಂಡ ಸಿನಿಪ್ರೇಮಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಮೊದಲು ಮಾತು ಆರಂಭಿಸಿದ ನಿರ್ದೇಶಕ ಅನಿಲ್ ಕುಮಾರ್, ನಮ್ಮ ಈ ಸಿನಿಮಾ ಆರಂಭವಾಗಿದ್ದು, ಚಿಕ್ಕಣ್ಣ ಅವರ ಮನೆಯಿಂದ. ಅಲ್ಲೇ ನಿರ್ಮಾಪಕ ಉಮಾಪತಿ ಅವರು ಕಥೆ ಕೇಳಿದ್ದು. ಸ್ಕ್ರಿಪ್ಟ್ ಸಮಯದಲ್ಲಿ ಸಾಕಷ್ಟು ಜನರು ನನಗೆ ಸಹಕಾರ ನೀಡಿದ್ದಾರೆ. ಕನ್ನಡಿಗರಿಗೆ ನಮ್ಮ ಸಿನಿಮಾ ಇಷ್ಟವಾಗಿದೆ. ಕುಟುಂಬ ಸಮೇತ ಬಂದು ನೋಡುತ್ತಿದ್ದಾರೆ. ಬಹಳ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.
ಬಳಿಕ ಮಾತನಾಡಿದ ನಟ ಚಿಕ್ಕಣ್ಣ, ನಾನು ನಾಯಕ ನಟನಾಗುತ್ತಿದ್ದೇನೆ ಎಂದಾಗ ಕಾಲೆಳೆದವರೇ ಜಾಸ್ತಿ. ಕಾಲೆಳೆದವರೇ ಈಗ ಕಾಲ್ ಶೀಟ್ ಕೇಳುತ್ತಿದ್ದಾರೆ. ಕರ್ನಾಟಕದ ಜನ ನಮ್ಮ ಸಿನಿಮಾವನ್ನು ಗೆಲ್ಲಿಸಿದ್ದಾರೆ. ಅವರಿಗೆ ಇಲ್ಲಿಂದಲೇ ಶರಣು. ನನ್ನನ್ನು ನಂಬಿ ಹಣ ಹಾಕಿರುವ ನಿರ್ಮಾಪಕರಿಗೆ, ಒಳ್ಳೆಯ ಚಿತ್ರಕೊಟ್ಟ ನಿರ್ದೇಶಕರಿಗೆ ಹಾಗೂ ಇಡೀ ತಂಡಕ್ಕೆ ನನ್ನ ಧನ್ಯವಾದಗಳು. ನಾನು ನಾಯಕನಾಗಿ ನಟಿಸಿರುವ ಮೊದಲ ಚಿತ್ರಕ್ಕೆ ಶಿವ ರಾಜ್ಕುಮಾರ್, ದರ್ಶನ್, ಸುದೀಪ್, ಯಶ್, ಧ್ರುವ ಸರ್ಜಾ, ಪ್ರಜ್ವಲ್ ದೇವರಾಜ್, ಅಭಿಷೇಕ್ ಅಂಬರೀಶ್, ಧನ್ವೀರ್, ಸೂರ್ಯ ಸೇರಿದಂತೆ ಸಾಕಷ್ಟು ನಾಯಕರು ಪ್ರೋತ್ಸಾಹ ನೀಡಿದ್ದಾರೆ. ಅವರಿಗೆಲ್ಲರಿಗೂ ವಿಶೇಷ ಧನ್ಯವಾದಗಳು ಎಂದು ತಿಳಿಸಿದರು. ಸಹಾಯ ನೀಡಿದವರನ್ನು ನೆನೆಯಲು ಹೆಸರಿನ ಪಟ್ಟಿಯನ್ನೇ ಸಿದ್ಧ ಮಾಡಿಕೊಂಡು ಬಂದಿದ್ದ ಚಿಕ್ಕಣ್ಣ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದರು.