ಬೆಂಗಳೂರು:ಕಿರುತೆರೆ ನಟ ಸ್ಕಂದ ಅಶೋಕ್ ಅವರ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳನ್ನು ಹ್ಯಾಕ್ ಮಾಡಿರುವ ಕಿಡಿಗೇಡಿಗಳು, ಹಣಕಾಸಿನ ವಂಚನೆಗೆ ಪ್ರಯತ್ನಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಫೇಸ್‍ಬುಕ್ ಹಾಗೂ ಇನ್‌ಸ್ಟಾಗ್ರಾಂ ಎರಡೂ ಖಾತೆಗಳನ್ನು ಹ್ಯಾಕ್ ಮಾಡಲಾಗಿದ್ದು, ತಮ್ಮ ಬೆಂಬಲಿಗರಿಗೆ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭದ ಆಸೆಯನ್ನು ಒಡ್ಡಲಾಗುತ್ತಿದೆ ಎಂದು 'ರಾಧಾರಮಣ' ಧಾರಾವಾಹಿ ಖ್ಯಾತಿಯ ನಟ ಸ್ಕಂದ ಅಶೋಕ್ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹಣ ಹೂಡಿಕೆ ಮಾಡಿ ಲಾಭ ಪಡೆದುಕೊಳ್ಳಿ ಎಂದು ಸ್ಕಂದ ಅವರ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪೋಸ್ಟ್ ಪ್ರಕಟಿಸುತ್ತಿರುವ ಆರೋಪಿಗಳು, 'ತಮಗೆ ಒಂದೇ ತಿಂಗಳಲ್ಲಿ 4.90 ಸಾವಿರ ರೂ. ಲಾಭ ಬಂದಿದೆ' ಎಂಬ ತರಹದ ಪ್ರಚೋದನಾತ್ಮಕ ಸಂದೇಶಗಳನ್ನು ಪ್ರಕಟಿಸುತ್ತಿದ್ದಾರೆ. ನೈಜ ಎಂದು ನಂಬಿರುವ ಕೆಲ ಬೆಂಬಲಿಗರು ಹಣ ಹೂಡಿಕೆ ಮಾಡಿ ಮಚನೆಗೊಳಗಾಗಿದ್ದು, ಬಳಿಕ ಈ ವಿಚಾರವನ್ನು ನಟನ ಗಮನಕ್ಕೆ ತಂದಿದ್ದಾರೆ. ಕೂಡಲೇ ಮೈಕೋ ಲೇಔಟ್ ಠಾಣೆಗೆ ಸ್ಕಂದ ಅಶೋಕ್ ದೂರು ನೀಡಿದ್ದು, ಆರೋಪಿಗಳನ್ನು ಪತ್ತೆ ಹಚ್ಚುವಂತೆ ಹಾಗೂ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನ ರಿಟ್ರೀವ್ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ, ಯಾವುದೇ ಬೆಂಬಲಿಗರು ಹಣ ಹೂಡಿಕೆ ಮಾಡದಂತೆ ಅವರು ಮನವಿ ಮಾಡಿದ್ದಾರೆ.