ಹೈದರಾಬಾದ್ :ತೆಲಂಗಾಣ ರಾಜ್ಯ ಮಾದಕ ದ್ರವ್ಯ ನಿಗ್ರಹ ಬ್ಯೂರೋ (ಟಿಎಸ್‌ಎನ್‌ಎಬಿ) ತೆಲುಗು ಚಲನಚಿತ್ರ "ಗಾಂಜಾ ಶಂಕರ್" ಚಿತ್ರದ ಶೀರ್ಷಿಕೆಯನ್ನು ಬದಲಾಯಿಸುವಂತೆ ಸೂಚಿಸಿ, ನಿರ್ಮಾಪಕರಿಗೆ ನೋಟಿಸ್ ಜಾರಿ ಮಾಡಿದೆ. ಈ ಸಿನಿಮಾ ಶೀರ್ಷಿಕೆಯಿಂದಾಗಿ ವೀಕ್ಷಕರು, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಯುವಕರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದೆ.
"ನಿಮ್ಮ ಚಿತ್ರದಲ್ಲಿ ನಾಯಕ ಗಾಂಜಾ ವ್ಯಾಪಾರದಲ್ಲಿ ತೊಡಗಿರುವಂತೆ ಮತ್ತು ಆತನ ಕೃತ್ಯಗಳನ್ನು ವೈಭವೀಕರಿಸುವುದು ಮತ್ತು 'ಗಾಂಜಾ ಶಂಕರ್' ಶೀರ್ಷಿಕೆಯು ವೀಕ್ಷಕರ ಮೇಲೆ ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಯುವಕರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ'' ಎಂದು TSNAB ನಿರ್ದೇಶಕ ಸಂದೀಪ್ ಶಾಂಡಿಲ್ಯ ಹೇಳಿದ್ದಾರೆ.
"ನಿಮ್ಮ (ಗಾಂಜಾ ಶಂಕರ್) ಚಲನಚಿತ್ರದಲ್ಲಿ ಮಾದಕ ಗಾಂಜಾ ಸೇವನೆ, ಮಾರಾಟ, ದಂಧೆ ಮತ್ತು ಸರಬರಾಜನ್ನು ವೈಭವೀಕರಿಸುವ ಮತ್ತು ವಿರೋಚಿತ ಕೃತ್ಯವೆಂದು ತೋರಿಸುವ ಯಾವುದೇ ದೃಶ್ಯಗಳನ್ನು ಚಿತ್ರಿಸದಂತೆ ಮತ್ತು ಚಲನಚಿತ್ರದಲ್ಲಿ ಅಂತಹ ದೃಶ್ಯಗಳಿಂದ ದೂರವಿರುತ್ತೀರಿ ಎಂದು ನಾವು ನಿರೀಕ್ಷಿಸುತ್ತೇವೆ. ಇಂತಹ ಕೃತ್ಯಗಳನ್ನು ಪ್ರಚಾರ ಮಾಡಿದರೆ ಯುವ ಪೀಳಿಗೆಯ ಮೇಲೆ ದುಷ್ಪರಿಣಾಮ ಬೀರುತ್ತದೆ'' ಎಂದು ಅವರು ಹೇಳಿದ್ದಾರೆ.
'ಗಾಂಜಾ' ಪದವನ್ನು ಅಳಿಸುವ ಮೂಲಕ "ಗಾಂಜಾ ಶಂಕರ್" ಶೀರ್ಷಿಕೆಯನ್ನು ಬದಲಾಯಿಸುವಂತೆ ಚಲನಚಿತ್ರ ನಿರ್ಮಾಪಕರಿಗೆ ನಿರ್ದೇಶಿಸಲಾಗಿದೆ. ಗಾಂಜಾ/ಮಾದಕ ವಸ್ತು ಮತ್ತು ಸೈಕೋಟ್ರೋಪಿಕ್ ವಸ್ತುಗಳಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಾರ್ಹ ದೃಶ್ಯಗಳು ಕಂಡುಬಂದಲ್ಲಿ NDPS ಕಾಯ್ದೆ 1985 ರ ನಿಬಂಧನೆಗಳ ಅಡಿಯಲ್ಲಿ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದು TSNAB ಎಚ್ಚರಿಸಿದೆ. "ಗಾಂಜಾ ಶಂಕರ್" ಚಿತ್ರವನ್ನು ಸಂಪತ್ ನಂದಿ ನಿರ್ದೇಶಿಸಿದ್ದು, ಸಾಯಿ ಧರಂ ತೇಜ್ ನಟರಾಗಿದ್ದಾರೆ.
ಇದನ್ನೂ ಓದಿ:ಚೆಕ್ ರಿಟರ್ನ್ ಕೇಸ್: ಖ್ಯಾತ ನಿರ್ದೇಶಕ ರಾಜ್ಕುಮಾರ್ ಸಂತೋಷಿಗೆ 2 ವರ್ಷ ಜೈಲು ಶಿಕ್ಷೆ!