ಕರುನಾಡ ಚಕ್ರವರ್ತಿ ಜನಪ್ರಿಯತೆಯ ಶಿವರಾಜ್ಕುಮಾರ್ ಸರಣಿ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ನಟನ ಕೈಯಲ್ಲಿ ಮೂರ್ನಾಲ್ಕು ಬಹುನಿರೀಕ್ಷಿತ ಪ್ರೊಜೆಕ್ಟ್ಗಳಿದ್ದು, ಮುಂಬರುವ ಚಿತ್ರಗಳು ಹೇಗಿರಬಹುದು ಎಂಬ ಕುತೂಹಲ ಸಹಜವಾಗಿ ಪ್ರೇಕ್ಷಕರಲ್ಲಿ ಮೂಡಿದೆ. ನಿರೀಕ್ಷೆಗಳು ಹೆಚ್ಚುತ್ತಿದ್ದು, 'ಭೈರತಿ ರಣಗಲ್' ಬಿಡುಗಡೆ ದಿನಾಂಕ ಇನ್ನೇನು ಕೆಲವೇ ಕ್ಷಣಗಳಲ್ಲಿ ಹೊರ ಬೀಳಲಿದೆ.
ಚಿತ್ರತಂಡದ ಕಡೆಯಿಂದ ಪೋಸ್ಟರ್ ಒಂದು ಅನಾವರಣಗೊಂಡಿದೆ. ಅದರಲ್ಲಿ ಬಿಗ್ಗೆಸ್ಟ್ ರಿಲೀಸ್ ಡೇಟ್ ಅನೌನ್ಸ್ಮೆಂಟ್ ಎಂದು ಬರೆಯಲಾಗಿದೆ. ಕ್ಯಾಪ್ಷನ್ನಲ್ಲಿ, ''ಬಿಗ್ ನ್ಯೂಸ್ ಅಲರ್ಟ್! ದೊಡ್ಡ ಸುದ್ದಿ ಬಹಿರಂಗಪಡಿಸುವ ಸಮಯ ಬಂದಿದೆ. ಸಂಪರ್ಕದಲ್ಲಿರಿ, ಏಕೆಂದರೆ ಇದು ಮಹಾಕಾವ್ಯವಾಗಲಿದೆ! ಆಗಸ್ಟ್ 26, ಸೋಮವಾರ, ಸಮಯ - 3:30, ಸ್ಥಳ - ಯಲಹಂಕ ಗ್ಯಾಲೇರಿಯಾ ಮಾಲ್'' ಎಂದು ಬರೆಯಲಾಗಿದೆ. ಈ ಪ್ರಕಾರ, ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.
ಮಫ್ತಿ ನಿರ್ದೇಶಕ ನರ್ತನ್ ನಿರ್ದೇಶನದ 'ಭೈರತಿ ರಣಗಲ್' ಚಿತ್ರದಲ್ಲಿ ಶಿವಣ್ಣ ಬಹಳ ಕುತೂಹಲಕಾರಿ ಪಾತ್ರ ನಿರ್ವಹಿಸುತ್ತಿದ್ದಾರೆ. ಶೀರ್ಷಿಕೆಯಿಂದಲೇ ಕನ್ನಡ ಮಾತ್ರವಲ್ಲದೇ ದಕ್ಷಿಣ ಚಿತ್ರರಂಗದಲ್ಲಿ ಕುತೂಹಲ ಹುಟ್ಟುಹಾಕಿರುವ ಸಿನಿಮಾವಿದು. ಅದರಲ್ಲೂ ನಟ ಶಿವರಾಜ್ಕುಮಾರ್ ಪಾತ್ರದ ಸುತ್ತಲಿನ ಕುತೂಹಲ ದೊಡ್ಡ ಮಟ್ಟದಲ್ಲಿದೆ. ಶೀರ್ಷಿಕೆ, ಪೋಸ್ಟರ್ನಿಂದಲೇ ಸಖತ್ ಸದ್ದು ಮಾಡಿರುವ ಸಿನಿಮಾದ ಹಾಡೊಂದು ಇತ್ತೀಚೆಗೆ ಅನಾವರಣಗೊಂಡಿತ್ತು.
ನರ್ತನ್ ಹಾಗೂ ಶಿವಣ್ಣ ಕಾಂಬಿನೇಶನ್ನಲ್ಲಿ 2017ರಲ್ಲಿ ಮೂಡಿಬಂದಿದ್ದ ಮಫ್ತಿ ಚಿತ್ರದ ಪ್ರೀಕ್ವೆಲ್ 'ಭೈರತಿ ರಣಗಲ್'. ಗೀತಾ ಶಿವರಾಜಕುಮಾರ್ ಅವರು ತಮ್ಮ ಗೀತಾ ಪಿಕ್ಚರ್ಸ್ ಅಡಿ ಬಿಗ್ ಬಜೆಟ್ನಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.