ಕನ್ನಡದ ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆ ''ಕೆವಿಎನ್'' ತನ್ನ ಚೊಚ್ಚಲ ತಮಿಳು ಚಿತ್ರ ಘೋಷಿಸಿದೆ. ಸೌತ್ ಸೂಪರ್ ಸ್ಟಾರ್ ದಳಪತಿ ವಿಜಯ್ ಜೊತೆ ಸ್ಯಾಂಡಲ್ವುಡ್ನ ಫೇಮಸ್ ಪ್ರೊಡಕ್ಷನ್ ಹೌಸ್ ಕೈ ಜೋಡಿಸಿದೆ. ಕಳೆದ ಸಂಜೆ ಸಿನಿಮಾವನ್ನು ಅಧಿಕೃತವಾಗಿ ಘೋಷಿಸಿದ ಚಿತ್ರತಂಡ ಇಂದು ಫಸ್ಟ್ ಲುಕ್ ಅನಾವರಣಗೊಳಿಸೋ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.
ಫಸ್ಟ್ ಪೋಸ್ಟರ್ ರಿಲೀಸ್: ಇಂದು ಅನಾವರಣಗೊಂಡಿರುವ ಪೋಸ್ಟರ್ನಲ್ಲಿ ಪಂಜಿನ ಚಿತ್ರದ ಜೊತೆಗೆ ಸಿನಿಮಾ ಕುರಿತ ಮಾಹಿತಿ ಇದೆ. ಶೀಘ್ರದಲ್ಲೇ ಬರಲಿದೆ ಎಂದು ಕೂಡಾ ಬರೆಯಲಾಗಿದೆ. ಚಿತ್ರಕ್ಕೆ ಹೆಚ್ ವಿನೋದ್ (H Vinoth) ಆ್ಯಕ್ಷನ್ ಕಟ್ ಹೇಳಲಿದ್ದಾರೆ. ದಕ್ಷಿಣ ಚಿತ್ರರಂಗದ ಖ್ಯಾತ ಗಾಯಕ ಅನಿರುಧ್ ಅವರ ಸಂಗೀತವಿರಲಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ನಿರ್ಮಿಸುತ್ತಿರುವ ವೆಂಕಟ್ ಕೆ ನಾರಾಯಣ್ ನಿರ್ಮಾಣದ ಈ ಚಿತ್ರಕ್ಕೆ ಜಗದೀಶ್ ಪಳನಿಸ್ವಾಮಿ ಮತ್ತು ಲೋಹಿತ್ ಎನ್ ಕೆ ಅವರ ಸಹ ನಿರ್ಮಾಣ ಇರಲಿದೆ. ಬಹುನಿರೀಕ್ಷಿತ ಚಿತ್ರ 2025ರ ಅಕ್ಟೋಬರ್ಗೆ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಲಿದೆ.
ಪ್ಯಾನ್ ಇಂಡಿಯಾ ಸಿನಿಮಾಗಳ ಭರಾಟೆ ಜೋರಾಗಿದೆ. ಈಗಾಗಲೇ ಹೊಂಬಾಳೆ ಫಿಲ್ಮ್ಸ್ ಬಹುಭಾಷೆಗಳಿಗೆ ತನ್ನ ಗಡಿ ವಿಸ್ತರಿಸಿಕೊಂಡಿದೆ. ಅದೇ ಹಾದಿಯಲ್ಲಿ 'ಕೆವಿಎನ್' ಸಾಗುತ್ತಿದೆ. ಜೂನಿಯರ್ ಎನ್ಟಿಆರ್ ನಟನೆಯ ದೇವರ, ಸೂರ್ಯ ಮುಖ್ಯಭೂಮಿಕೆಯ ಕಂಗುವ ಸಿನಿಮಾಗಳನ್ನು ರಾಜ್ಯದಲ್ಲಿ ವಿತರಿಸಲಿದೆ. ಇದೀಗ ದಳಪತಿ ವಿಜಯ್ ಕೊನೆ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದೆ.
ವಿಜಯ್ ಅವರ ಈ ಚಿತ್ರ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಲಿದೆ. ಕೆವಿನ್ ಸಂಸ್ಥೆಯ ಮಾರ್ಕೆಟಿಂಗ್ ಹೆಡ್ ಸುಪ್ರೀತ್ ಮಾತನಾಡಿ, ನಮ್ಮ ಸಂಸ್ಥೆಯಿಂದ ಬಹುಕೋಟಿ ವೆಚ್ಚದಲ್ಲಿ ವಿಜಯ್ ಸಿನಿಮಾ ನಿರ್ಮಾಣ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಕೆವಿಎನ್ ಸಂಸ್ಥೆಯ ವೆಂಕಟ್ ನಾರಾಯಣ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಬರೋಬ್ಬರಿ 500 ಕೋಟಿ ರೂ. ಎಂದು ಹೇಳಲಾಗುತ್ತಿದೆ.