ನವದೆಹಲಿ: ಜನಪ್ರಿಯ ಕಾರ್ಯಕ್ರಮ 'ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ' ಮೂಲಕ ಗಮನ ಸೆಳೆದಿರುವ ನಟ ಗುರುಚರಣ್ ಸಿಂಗ್ ಅವರು ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾರೆ. ನಟನ ತಂದೆ ಮಗ ಕಾಣೆಯಾಗಿರುವ ಬಗ್ಗೆ ದೆಹಲಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ದೆಹಲಿ ಪೊಲೀಸರಿಗೆ ತಂದೆ ನೀಡಿರುವ ದೂರಿನ ಪ್ರಕಾರ, 50ರ ಹರೆಯದ ನಟ ಏಪ್ರಿಲ್ 22 ರಂದು ದೆಹಲಿಯ ತಮ್ಮ ನಿವಾಸದಿಂದ ಮುಂಬೈಗೆ ತೆರಳಿದ್ದಾರೆ. ಅಂದಿನಿಂದ ಅವರು ನಾಪತ್ತೆಯಾಗಿದ್ದಾರೆ. ಅವರು ಮುಂಬೈಗೆ ಬಂದಿಳಿಯಬೇಕಿತ್ತು, ಆದರೆ ಮುಂಬೈ ತಲುಪಿಲ್ಲ. ಮನೆಗೂ ವಾಪಸಾಗಲಿಲ್ಲ. ಫೋನ್ ಸಂಪರ್ಕಕ್ಕೂ ಸಿಗಲಿಲ್ಲ. ಈ ಹಿನ್ನೆಲೆ ಪೊಲೀಸ್ ಠಾಣಾ ಮೆಟ್ಟಿಲೇರಬೇಕಾಯಿತು.
"ಅವರು ಮಾನಸಿಕವಾಗಿ ಸ್ಥಿರವಾಗಿದ್ದು, ನಾವು ಅವರುನ್ನು ಹುಡುಕಿದ್ದೇವೆ. ಆದ್ರೀಗ ಅವರು ಕಾಣೆಯಾಗಿದ್ದಾರೆ" ಎಂದು ಗುರುಚರಣ್ ಸಿಂಗ್ ತಂದೆ ಪೊಲೀಸರಲ್ಲಿ ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಈ ನಾಪತ್ತೆ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ನಾವು ಪರಿಶೀಲಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.