ಸೌತ್ ಸೂಪರ್ ಸ್ಟಾರ್ ಸೂರ್ಯ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ 'ಕಂಗುವ' ಇಂದು ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿದೆ. ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಮಾರ್ನಿಂಗ್ ಶೋಗಳು ನಡೆದಿವೆ. ಉತ್ತಮ ಪ್ರದರ್ಶನ ಕಾಣುತ್ತಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
'ಕಂಗುವ' ಸಿನಿಮಾ ಬಾಲಿವುಡ್ ತಾರೆಯರಾದ ಬಾಬಿ ಡಿಯೋಲ್ ಮತ್ತು ದಿಶಾ ಪಟಾನಿ ಅವರನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸಿದೆ. ಅಲ್ಲದೇ ಬಹುನಿರೀಕ್ಷಿತ ಚಿತ್ರ ಯೋಗಿ ಬಾಬು, ರೆಡಿನ್ ಕಿಂಗ್ಸ್ಲಿ ಮತ್ತು ಕೆಎಸ್ ರವಿಕುಮಾರ್ ಅವರಂತಹ ಪ್ರತಿಭಾನ್ವಿತರನ್ನು ಒಳಗೊಂಡಿದ್ದು ಸ್ಟ್ಯಾಂಡರ್ಡ್, 3ಡಿ ಮತ್ತು ಐಮ್ಯಾಕ್ಸ್ ಸ್ವರೂಪಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಸ್ಟುಡಿಯೋ ಗ್ರೀನ್ ಮತ್ತು ಯುವಿ ಕ್ರಿಯೇಷನ್ಸ್ ನಿರ್ಮಾಣದ ಈ ಚಿತ್ರದಲ್ಲಿ ಸೂರ್ಯ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಬಾಕ್ಸ್ ಆಫೀಸ್ ಕಲೆಕ್ಷನ್ ಹೇಗಿರಲಿದೆ?:ಮೊದಲ ದಿನದ ಪ್ರದರ್ಶನಗಳು ಅದ್ಭುತವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಆರಂಭಿಕ ಮಾಹಿತಿಯ ಪ್ರಕಾರ, ಅಡ್ವಾನ್ಸ್ ಬುಕ್ಕಿಂಗ್ನಲ್ಲಿ 17.61 ಕೋಟಿ ರೂಪಾಯಿ ವ್ಯವಹಾರ ನಡೆದಿದೆ. ಸಿನಿಮಾ ವಿಶ್ವಾದ್ಯಂತ 10,000 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ. ಕಾಲಿವುಡ್ ಇತಿಹಾಸದಲ್ಲೇ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿರುವ ಸಿನಿಮಾ ಇದು. ಟ್ರೇಡ್ ಬಝ್ ಪ್ರಕಾರ, ಕಂಗುವ ಮೊದಲ ದಿನ 15 ರಿಂದ 20 ಕೋಟಿ ರೂ. ಕಲೆಕ್ಷನ್ ಮಾಡಲಿದೆ. ಭಾರಿ ನಿರೀಕ್ಷೆಗಳೊಂದಿಗೆ ಬಂದ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಜಾಕ್‌ಪಾಟ್ ಹೊಡೆಯಲಿದೆಯೇ ಎಂಬುದನ್ನು ತಿಳಿಯಲು ನಾಳೆ ಮುಂಜಾನೆವರೆಗೂ ಕಾಯಬೇಕಿದೆ.
ಸೋಷಿಯಲ್ ಮೀಡಿಯಾ ಪ್ಲ್ಯಾಟ್‌ಫಾರ್ಮ್ ಎಕ್ಸ್ನಲ್ಲಿನ ಆರಂಭಿಕ ಪ್ರತಿಕ್ರಿಯೆಗಳು ಪ್ರಶಂಸೆ ಮತ್ತು ಟೀಕೆಗಳೆರಡನ್ನೂ ಒಳಗೊಂಡಿದೆ. ಕೆಲ ಅಭಿಮಾನಿಗಳು ನಾಯಕ ನಟ ಸೂರ್ಯ ಚಿತ್ರಣ ಮತ್ತು ಪಾತ್ರಕ್ಕೆ ಅವರ ಸಮರ್ಪಣೆ ಕೊಂಡಾಡಿದ್ದಾರೆ. ಅಲ್ಲದೇ ಅವರ ಅಭಿನಯವೇ ಚಿತ್ರದ ಹೈಲೈಟ್ ಎಂದು ತಿಳಿಸಿದ್ದಾರೆ.