ದಕ್ಷಿಣ ಚಿತ್ರರಂಗದ ಖ್ಯಾತ ನಟ ಸೂರ್ಯ ಶಿವಕುಮಾರ್ ಅವರ ಅಭಿಮಾನಿಗಳು ಕಳೆದ ಕೆಲ ವರ್ಷಗಳಿಂದ ರಕ್ತದಾನ, ಪುಸ್ತಕ ದಾನ, ಮರ ನೆಡುವಿಕೆ ಸೇರಿದಂತೆ ಮಾನವೀಯ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಕಳೆದ ವರ್ಷ ತಮ್ಮ ಮೆಚ್ಚಿನ ನಟನ ಜನ್ಮದಿನದ ಸಂದರ್ಭ 2,000ಕ್ಕೂ ಹೆಚ್ಚು ಅಭಿಮಾನಿಗಳು ರಕ್ತದಾನ ಮಾಡಿದ್ದರು. ಮುಂದಿನ ವರ್ಷ ಈ ಕಾರ್ಯದಲ್ಲಿ ತಾನೂ ಭಾಗವಹಿಸುವುದಾಗಿ ಸೂರ್ಯ ಭರವಸೆ ನೀಡಿದ್ದರು. ಅದರಂತೆ ಇದೀಗ ನಟ ತಾನು ಕೊಟ್ಟ ಮಾತು ನೆರವೇರಿಸಿ ಗಮನ ಸೆಳೆದಿದ್ದಾರೆ.
ಜುಲೈ 23ರಂದು (ಮುಂದಿನ ಮಂಗಳವಾರ) ಸೂರ್ಯ ತಮ್ಮ 49ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅದಕ್ಕೂ ಮುನ್ನ ಸೋಮವಾರದಂದು ತಮ್ಮ ಅಭಿಮಾನಿಗಳೊಂದಿಗೆ ರಕ್ತದಾನ ಮಾಡಿದ್ದಾರೆ. ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸೋ ನಿಟ್ಟಿನಲ್ಲಿ ಈ ರಕ್ತದಾನದಲ್ಲಿ 400ಕ್ಕೂ ಅಭಿಮಾನಿಗಳು ಭಾಗಿಯಾಗಿದ್ದರು. ಈ ಕಾರ್ಯ ಮುಂದುವರಿಯಲಿದೆ. ಕಳೆದ ದಿನ ನಟನ ಫೋಟೋ - ವಿಡಿಯೋಗಳು ವೈರಲ್ ಆದ ನಂತರ ಅನೇಕರು ಸ್ಫೂರ್ತಿ ಪಡೆದಿದ್ದು, ಇಂತಹ ಮಾನವೀಯ ಕಾರ್ಯ ಕೈಗೊಳ್ಳಲು ಮುಂದಾಗುತ್ತಿದ್ದಾರೆ.
ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟ ಸಿನಿಮಾ ಜೊತೆ ಜೊತೆಗೆ ಸಾಮಾಜಿಕ ಸೇವೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಾನವೀಯ ಕಾರ್ಯಗಳಿಗೆ ಅಭಿಮಾನಿಗಳನ್ನೂ ಪ್ರೇರೇಪಿಸುತ್ತಾರೆ. ಇದಕ್ಕೂ ಮುನ್ನ ಕಲ್ಲಾಕುರಿಚಿ ಜಿಲ್ಲೆಯಲ್ಲಿ ಅಕ್ರಮ ಮದ್ಯ ಸೇವಿಸಿ ಅನೇಕರು ಸಾವನ್ನಪ್ಪಿರುವ ಬಗ್ಗೆ ಮಾತನಾಡಿದ್ದ ಸೂರ್ಯ, ಇಂತಹ ದುರ್ಘಟನೆಗಳನ್ನು ತಡೆಯಲು ಸರ್ಕಾರ ಮತ್ತು ರಾಜಕೀಯ ಪಕ್ಷಗಳು ದೂರದೃಷ್ಟಿಯಿಂದ ಕಾರ್ಯ ನಿರ್ವಹಿಸಬೇಕೆಂದು ಒತ್ತಾಯಿಸಿದ್ದರು. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದ ನಟ, "ಸರ್ಕಾರ ಮತ್ತು ರಾಜಕೀಯ ಪಕ್ಷಗಳು ದೂರದೃಷ್ಟಿಯಿಂದ ಕಾರ್ಯನಿರ್ವಹಿಸಿದರೆ ನಾವು ಭವಿಷ್ಯದಲ್ಲಿ ಇಂತಹ ಅನಾಹುತಗಳನ್ನು ತಡೆಯಬಹುದು. ಅಲ್ಪಾವಧಿ ಪರಿಹಾರ ಲೆಕ್ಕಿಸದೇ, ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ" ಎಂದು ಬರೆದುಕೊಂಡಿದ್ದರು.