ಚೆನ್ನೈ (ತಮಿಳುನಾಡು):ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ನಾಯಕರಾಗಿ ಹೊರಹೊಮ್ಮಿ, ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲು ನರೇಂದ್ರ ಮೋದಿ ಅವರು ಸಜ್ಜಾಗಿದ್ದಾರೆ. ದೇಶ- ವಿದೇಶದ ಗಣ್ಯರಿಗೆ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ. ಸೂಪರ್ಸ್ಟಾರ್, ಹಿರಿಯ ನಟ ರಜನಿಕಾಂತ್ ಅವರನ್ನೂ ಕಾರ್ಯಕ್ರಮಕ್ಕೆ ಬರಲು ಕರೆಯೋಲೆ ನೀಡಲಾಗಿದೆ.
ಮೋದಿ ಅವರು ಮತ್ತೆ ಪ್ರಧಾನಿ ಆಗುತ್ತಿರುವುದರ ಬಗ್ಗೆ ಮಾತನಾಡಿದ ಹಿರಿಯ ನಟ, ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿ ಆಗುತ್ತಿರುವುದು ಅತಿದೊಡ್ಡ ಸಾಧನೆಯಾಗಿದೆ. ಜೊತೆಗೆ ವಿರೋಧ ಪಕ್ಷಗಳೂ ಬಲವರ್ಧನೆಗೊಂಡಿರುವುದು ಪ್ರಜಾಪ್ರಭುತ್ವದ ಆರೋಗ್ಯಕರ ಬೆಳವಣಿಗೆಯಾಗಿದೆ ಎಂದು ಹೇಳಿದರು.
ದೆಹಲಿಗೆ ಪ್ರಯಾಣಿಸುವ ಮೊದಲು ತಮ್ಮ ನಿವಾಸದ ಮುಂದೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಎನ್ಡಿಎ ನಾಯಕರಾಗಿ ಮೋದಿ ಅವರು ಮೂರನೇ ಬಾರಿಗೆ ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ. ಇದು ಸಣ್ಣ ಸಾಧನೆಯಲ್ಲ. ಮಾಜಿ ಪ್ರಧಾನಿ ದಿವಂಗತ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಬಳಿಕ ಮೂರನೇ ಸಲ ಪಿಎಂ ಆಗುತ್ತಿದ್ದಾರೆ. ಇದು ಶ್ಲಾಘನೀಯ ವಿಚಾರ ಎಂದು ಬಣ್ಣಿಸಿದರು.
ಮುಂದಿನ ಐದು ವರ್ಷಗಳಲ್ಲಿ ಸರ್ಕಾರದ ಆಡಳಿತ ಹೇಗೆ ಇರಬಹುದು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮೋದಿ ಅವರ ಆಡಳಿತವು ಉತ್ತಮವಾಗಿರುತ್ತದೆ. ಅದನ್ನು ಅವರು ಪೂರೈಸಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ:3ನೇ ಅವಧಿಗೆ ದೇಶದ ಪ್ರಧಾನಿಯಾಗಿ ಇಂದು ಸಂಜೆ ಮೋದಿ ಪ್ರಮಾಣ - Modi Oath Taking Ceremony