ಫೆಬ್ರವರಿ 6, ಗುರುವಾರ ತೆರೆಗಪ್ಪಳಿಸಿದ ದಕ್ಷಿಣ ಚಿತ್ರರಂಗದ ಬಹುಬೇಡಿಕೆ ನಟ ಅಜಿತ್ ಕುಮಾರ್ ಅವರ 'ವಿಡಾಮುಯರ್ಚಿ' ಸಿನಿಮಾ ಪೈರಸಿಗೆ ಬಲಿಯಾಗಿದೆ. ಕಳೆದ ದಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ, ಇಡೀ ಚಿತ್ರ ಆನ್‌ಲೈನ್‌ನಲ್ಲಿ ಸೋರಿಕೆ ಆಗಿದೆ. ಹಲವು ಪೈರಸಿ ವೆಬ್ಸೈಟ್ಗಳಲ್ಲಿ ಸಿನಿಮಾ ಲಭ್ಯವಿದೆ.
ಮಾಗಿಜ್ ತಿರುಮೇನಿ ಬರೆದು, ಆ್ಯಕ್ಷನ್ ಕಟ್ ಹೇಳಿರುವ ಈ ಆಕ್ಷನ್ - ಥ್ರಿಲ್ಲರ್ ಚಿತ್ರದಲ್ಲಿ ಅಜಿತ್ ಕುಮಾರ್ ಜೊತೆಗೆ ದಕ್ಷಿಣದ ಬಹುಬೇಡಿಕೆ ನಟಿ ತ್ರಿಶಾ ಕೃಷ್ಣನ್ ತೆರೆಹಂಚಿಕೊಂಡಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಅಡಿ ಸುಬಾಸ್ಕರನ್ ಅಲ್ಲಿರಾಜ ಅವರು 200 ಕೋಟಿ ರೂಪಾಯಿಗೂ ಹೆಚ್ಚು ಬಜೆಟ್‌ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಉತ್ತಮ ಕಲೆಕ್ಷನ್ ಭರವಸೆಯಲ್ಲಿದ್ದ ಚಿತ್ರತಂಡಕ್ಕೆ ಈಗ ತಮ್ಮ ಸಿನಿಮಾ ಲೀಕ್ನಿಂದಾಗಿ ಶಾಕ್ ಆಗಿದೆ. ತೆರೆಕಂಡ ಕೆಲವೇ ಗಂಟೆಗಳಲ್ಲಿ ಚಿತ್ರ ಸೋರಿಕೆಯಾಗಿರೋದು ಅದರ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಹೊಡೆತ ಬೀಳಲಿದೆ.
ತಮಿಳುರಾಕರ್ಸ್, ಫಿಲ್ಮಿಜಿಲ್ಲಾ, ಮೂವೀಸ್ಡಾ ಮತ್ತು ವೆಗಾಮೂವೀಸ್‌ನಂತಹ ವೆಬ್‌ಸೈಟ್‌ಗಳು ಅಜಿತ್ ಮತ್ತು ತ್ರಿಶಾ ನಟನೆಯ ಈ 'ವಿಡಾಮುಯರ್ಚಿ' ಪೈರಸಿ ಆವೃತ್ತಿಗಳನ್ನು ಬಿಡುಗಡೆ ಮಾಡಿವೆ. ಇದರಲ್ಲಿ ಹೆಚ್ಡಿ ಮತ್ತು ಕಡಿಮೆ ಗುಣಮಟ್ಟದ ಆವೃತ್ತಿಗಳು ಸೇರಿವೆ. ಈ ಸೋರಿಕೆಯು ಚಿತ್ರದ ಬಾಕ್ಸ್ ಆಫೀಸ್ ಪ್ರದರ್ಶನದ ಮೇಲೆ ಪರಿಣಾಮ ಬೀರಬಹುದು ಎಂದು ಚಿತ್ರತಂಡ ಮಾತ್ರವಲ್ಲದೇ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.