ಕರ್ನಾಟಕ

karnataka

ETV Bharat / entertainment

ಚಿತ್ರರಂಗದಲ್ಲಿ 28 ವರ್ಷ ಪೂರೈಸಿದ ಸುದೀಪ್​: ಐರನ್‌ ಲೆಗ್ ನಟ‌ನೆಂದು ಕರೆಸಿಕೊಂಡವರೀಗ ಸೂಪರ್​ ಸ್ಟಾರ್

1996ರ ಜನವರಿ 31ರಂದು ಕಂಠೀರವ ಸ್ಟುಡಿಯೋದಿಂದ ವೃತ್ತಿಜೀವನ ಆರಂಭಿಸಿದ ಅಭಿನಯ ಚಕ್ರವರ್ತಿ ಸುದೀಪ್​ ಸಿನಿಪಯಣಕ್ಕೀಗ 28ವರ್ಷಗಳ ಸಂಭ್ರಮ.

Sudeep
ಚಿತ್ರರಂಗದಲ್ಲಿ 28 ವರ್ಷ ಪೂರೈಸಿದ ಸುದೀಪ್

By ETV Bharat Karnataka Team

Published : Jan 31, 2024, 8:09 PM IST

ಕಿಚ್ಚ ಸುದೀಪ್...ಸ್ಯಾಂಡಲ್​ವುಡ್​ ಮಾತ್ರವಲ್ಲದೇ ಭಾರತೀಯ ಚಿತ್ರರಂಗದಲ್ಲಿ ಬಹುಮುಖ ಪ್ರತಿಭೆ ಎಂದು ಕರೆಸಿಕೊಂಡಿರುವ ನಟ. ಅಭಿನಯ ಚಕ್ರವರ್ತಿ, ಕಿಚ್ಚ, ಬಾದಾಷಾ, ಹೆಬ್ಬುಲಿ, ಪೈಲ್ವಾನ್ ಹೀಗೆ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಇವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಚಿತ್ರರಂಗದಲ್ಲಿ ಸಾಕಷ್ಟು ಏಳು -ಬೀಳುಗಳನ್ನ ಕಂಡಿರುವ ಕಿಚ್ಚ ಸುದೀಪ್​​, 1996ರ ಜನವರಿ 31ರಂದು ಕಂಠೀರವ ಸ್ಟುಡಿಯೋದಿಂದ ಸಿನಿ ಪಯಣ ಆರಂಭಿಸಿದ್ದರು. ಈ ಜರ್ನಿಗೀಗ 28 ವರ್ಷಗಳ ಸಂಭ್ರಮ.

ಮಲೆನಾಡಿನ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ದೀಪು ಅಂದರೆ ಸುದೀಪ್ ತಾನೊಬ್ಬ ಕ್ರಿಕೆಟ್ ಸ್ಟಾರ್ ಆಗಬೇಕು ಎಂಬ ಕನಸು ಕಂಡಿದ್ದ ಹ್ಯಾಂಡ್ಸಂ ಹುಡುಗ. ಆದರೆ ಯಾವುದೇ ಸಿನಿಮಾ ಗಾಡ್ ಫಾದರ್ ಇಲ್ಲದೇ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವುದು ಇತಿಹಾಸ.

ಕಿಚ್ಚ ಸುದೀಪ್​ ಡಿಪಿ ಅನಾವರಣ

ಕಲ್ಲು ಮುಳ್ಳುಗಳಿಂದ ಕೂಡಿದ ಜರ್ನಿ:ನಟನಾಗಿ,‌ ನಿರ್ದೇಶಕನಾಗಿ, ನಿರ್ಮಾಪಕನಾಗಿ, ಗಾಯಕನಾಗಿ, ನಿರೂಪಕನಾಗಿ ಹಾಗೇ ಕ್ರಿಕೆಟ್ ಆಟಗಾರನಾಗಿ ಸಕ್ಸಸ್ ಕಂಡಿರುವ ಹೆಬ್ಬುಲಿ ಕನ್ನಡ ಚಿತ್ರರಂಗಕ್ಕೆ ಬಂದು ಎರಡೂವರೇ ದಶಕಗಳಾಗಿದೆ. ಇನ್ನೆರಡು ವರ್ಷ ಕಳೆದರೆ ಮೂರು ದಶಕ ಪೂರ್ಣಗೊಳ್ಳಲಿದೆ. ಸದ್ಯ ಕಿಚ್ಚನ ಅಭಿಮಾನಿಗಳು 28ನೇ ವರ್ಷದ ಡಿಪಿ ರಿವೀಲ್ ಮಾಡುವ ಮೂಲಕ ಅಚ್ಚುಮೆಚ್ಚಿನ ನಟನಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಕಿಚ್ಚನ ಸಿನಿ ಪಯಣದ ಆರಂಭದ ದಿನಗಳು ಸುಲಭವಿರಲಿಲ್ಲ. ಈ ಜರ್ನಿ ಕಲ್ಲು ಮುಳ್ಳುಗಳಿಂದ ಕೂಡಿತ್ತು‌.

ಚಿತ್ರರಂಗದಲ್ಲಿ 28 ವರ್ಷ ಪೂರೈಸಿದ ಸುದೀಪ್

ಸುದೀಪ್​ ಸಿನಿ ಪಯಣ:ಹೌದು, ಸುದೀಪ್ ಮೊದಲು ಬಣ್ಣ ಹಚ್ಚಿದ್ದು 'ಬ್ರಹ್ಮ' ಚಿತ್ರಕ್ಕಾದರೂ, ಇದು ಪೂರ್ತಿಯಾಗಲಿಲ್ಲ. ನಂತರ, 1997ರಲ್ಲಿ 'ತಾಯವ್ವ' ಚಿತ್ರದಲ್ಲಿ ನಟಿಸುತ್ತಾರೆ. ಆದರೆ, ಇದು ಸುದೀಪ್​​​​ಗೆ ಹೇಳಿಕೊಳ್ಳುವಂತ ಹೆಸರು ತಂದುಕೊಡುವುದಿಲ್ಲ. ಬಳಿಕ 'ಪ್ರತ್ಯರ್ಥ' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಚಿತ್ರ ಕೂಡಾ ಯಶಸ್ಸು ತಂದುಕೊಡಲಿಲ್ಲ. ಆ ಸಂದರ್ಭ, ಸುದೀಪ್ ಹಲವಾರು ಸಂದರ್ಶನಗಳಲ್ಲಿ ಹೇಳಿಕೊಂಡಿರುವ ಹಾಗೆ, 'ಸುದೀಪ್ ಐರನ್ ಲೆಗ್' ಅನ್ನೋ ಮಾತುಗಳು ಬರುತ್ತವೆ. ಆಗ ಸುದೀಪ್ ಚಿತ್ರರಂಗದ ಸಹವಾಸವೇ ಸಾಕು ಎಂದು ನಿರ್ಧರಿಸಿ ಬಿಡುತ್ತಾರೆ.

ಅಭಿನಯ ಚಕ್ರವರ್ತಿ ಸುದೀಪ್​

ಆ ಸಮಯದಲ್ಲಿ ಅವರಿಗೆ ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ 'ಸ್ಪರ್ಶ' ಸಿನಿಮಾ ಒಂದು ಮಟ್ಟಿಗೆ ಹೆಸರು ನೀಡುತ್ತದೆ. ಸುದೀಪ್ ತಂದೆ ಸಂಜೀವ್​​ ಸರೋವರ್ 1999ರಲ್ಲಿ ಸುಮಾರು ಒಂದೂವರೆ ಕೋಟಿ ರೂಪಾಯಿ ಬಜೆಟ್​​​ನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದರು. ಕ್ಯೂಟ್ ಲವ್ ಸ್ಟೋರಿ ಜೊತೆ ಸುಂದರ ಹಾಡುಗಳು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದ್ದವು. ಸುದೀಪ್ ಮತ್ತು ರೇಖಾ ಕೆಮಿಸ್ಟ್ರಿ ಸಖತ್​ ವರ್ಕ್ ಔಟ್ ಆಗಿ, ಸಿನಿಮಾ ಸಕ್ಸಸ್ ಆಗಿತ್ತು. ಆ ಕಾಲದಲ್ಲಿ ಸ್ಪರ್ಶ ಸಿನಿಮಾ ಸುಮಾರು 4 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಕಿಚ್ಚನಿಗೆ ಸ್ಟಾರ್ ಪಟ್ಟ ತಂದುಕೊಡುತ್ತೆ. ಈ ಚಿತ್ರದಲ್ಲಿ ಸುದೀಪ್​​ ಆ್ಯಕ್ಟರ್, ಡೈರೆಕ್ಟರ್ ಹಾಗೂ ಪ್ರೊಡ್ಯೂಸರ್ ಆಗಿ ಕೂಡಾ ಗುರುತಿಸಿಕೊಂಡರು.

ಈ ಚಿತ್ರದ ಬಳಿಕ‌ ಸುದೀಪ್ ಸಿನಿಮಾ ಕೆರಿಯರ್ ಮಹತ್ವದ ತಿರುವು ನೀಡಿದ ಚಿತ್ರ 'ಹುಚ್ಚ'. ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರ, 2001ರಲ್ಲಿ ತೆರೆ ಕಾಣುತ್ತೆ. ಹುಚ್ಚ ಚಿತ್ರ ಕಿಚ್ಚನ ಇಡೀ ಜೀವನ ಬದಲಿಸಿ ಬಿಡುತ್ತದೆ. ಈ ಚಿತ್ರದ ಮೂಲಕ ಇಡೀ ಕನ್ನಡನಾಡಿಗೆ ಕಿಚ್ಚ ಪರಿಚಯ ಆದರು. ಈ ಸಿನಿಮಾದಲ್ಲಿನ ಅಭಿನಯ ನಿಜಕ್ಕೂ ಕಿಚ್ಚನಲ್ಲಿರೋ ಅಷ್ಟೂ ಪ್ರತಿಭೆಯನ್ನ ಪ್ರದರ್ಶಿಸಿತ್ತು ಅಂದ್ರೆ ತಪ್ಪಿಲ್ಲ. ಅಲ್ಲಿಂದ ಕಿಚ್ಚ ಸುದೀಪ್ ಮತ್ತೆ ಹಿಂದೆ ತಿರುಗಿ ನೋಡಲೇ ಇಲ್ಲ.

ಈ ಚಿತ್ರಗಳ ಬಳಿಕ ಬಂದ ವೀರ ಮದಕರಿ, ಕೆಂಪೇಗೌಡ, ತೆಲುಗಿನ ಈಗ, ಮಾಣಿಕ್ಯ, ರನ್ನ, ಕೋಟಿಗೊಬ್ಬ 2, ಹೆಬ್ಬುಲಿ, ಪೈಲ್ವಾನ್, ವಿಕ್ರಾಂತ್ ರೋಣ ಸೇರಿದಂತೆ 60ಕ್ಕೂ ಸಿನಿಮಾಗಳು ಕೂಡ ಸದ್ದು ಮಾಡಿವೆ. ಇನ್ನೂ ಮೈ ಆಟೋಗ್ರಾಫ್, ವೀರಮದಕರಿ, ಜಸ್ಟ್ ಮಾತ್ ಮಾತಲ್ಲಿ, ಕೆಂಪೇಗೌಡ, ಮಾಣಿಕ್ಯ ಹೀಗೆ ಹಲವು ಸಿನಿಮಾಗಳನ್ನ ನಿರ್ದೇಶನ ಮಾಡಿ ಕಿಚ್ಚ ಸಕ್ಸಸ್ ಕಾಣ್ತಾರೆ. ಇದರ ಜೊತೆಗೆ ಎಸ್.ಎಸ್. ರಾಜಮೌಳಿ ನಿರ್ದೇಶನದ "ಈಗ" ಚಿತ್ರ ಕಿಚ್ಚನ ಇಮೇಜ್ ಬದಲಿಸಿತ್ತು. ಕನ್ನಡಕ್ಕೆ ಮಾತ್ರ ಸೀಮಿತ ಆಗಿದ್ದ ಕಿಚ್ಚ ಸುದೀಪ್ ಈಗ ಚಿತ್ರದ ಮೂಲಕ ಭಾರತೀಯರಿಗೆ ಪರಿಚಯ ಆದರು. ಈಗ ಚಿತ್ರ ಆದ್ಮೇಲೆ ಕಿಚ್ಚ ಸುದೀಪ್ ಬಾಹುಬಲಿ ಚಿತ್ರದಲ್ಲಿ ಅಸ್ಲಮ್ ಖಾನ್ ಪಾತ್ರದಲ್ಲಿ ಅಭಿನಯಿಸಿದ್ದರು.

ಇದನ್ನೂ ಓದಿ:ಅವಮಾನ-ಆಕ್ರೋಶಕ್ಕೆ ಯಶಸ್ಸಿನ ಉತ್ತರ: ಬಿಗ್‌ ಬಾಸ್‌ ರನ್ನರ್ ಅಪ್ ಪ್ರತಾಪ್‌ ಪ್ರಯಾಣ ಮೆಚ್ಚಿದ್ರಾ?

ಕಿಚ್ಚ ಸುದೀಪ್ ಸಿನಿ ಪಯಣದಲ್ಲಿ ಬಾಲಿವುಡ್​ ಕೂಡ ಅಷ್ಟೇ ಪ್ರಮುಖ ಪಾತ್ರವಹಿಸುತ್ತದೆ. ರಾಮ್​ಗೋಪಾಲ್​ ವರ್ಮಾ ಅವರ "ಫೂಂಕ್" ಚಿತ್ರದ ಮೂಲಕ ಬಾಲಿವುಡ್​ಗೂ ಎಂಟ್ರಿ ಕೊಟ್ಟರು. ಈ ಚಿತ್ರದ ಎರಡೂ ಸರಣಿಯ ಚಿತ್ರದಲ್ಲಿ ಕಿಚ್ಚ ಸುದೀಪ್ ನಟಿಸಿದರು. ತೆಲುಗು ಆದ್ಮಲೇ ತಮಿಳಿನಲ್ಲಿ ವಿಜಯ್ ಹಾಗೂ ಬಾಲಿವುಡ್ ನಟಿ ಶ್ರೀದೇವಿ ಜೊತೆ ಕಿಚ್ಚ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಬಿಗ್ ಬಿ ಅಮಿತಾಭ್ ಅವರ ಜೊತೆಗೂ ನಟಿಸಿದ್ದಾರೆ. ರಣ್ ಚಿತ್ರದಲ್ಲಿ ಅಮಿತಾಭ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡ ಕಿಚ್ಚ ಸುದೀಪ್ ಭೇಷ್ ಎನಿಸಿಕೊಂಡರು. ಬಳಿಕ ಸಲ್ಮಾನ್ ಖಾನ್ ಅಭಿನಯದ ದಬಾಂಗ್ ಸಿನಿಮಾದಲ್ಲಿ ಕಿಚ್ಚ ಖಳನಟನಾಗಿ ಅಬ್ಬರಿಸಿದರು. ಸದ್ಯ ಮ್ಯಾಕ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿರೋ ಕಿಚ್ಚ ಕನ್ನಡ ಚಿತ್ರರಂಗದ ನಿಜವಾದ ಮಾಣಿಕ್ಯ ಆಗಿದ್ದಾರೆ.

ಇದನ್ನೂ ಓದಿ:ನ್ಯೂಯಾರ್ಕ್‌ ಟೈಮ್ಸ್ ಸ್ಕ್ವೇರ್‌ನಲ್ಲಿ ಚಿರಂಜೀವಿ ಫೋಟೋ: ವಿಶೇಷವಾಗಿ ಅಭಿಮಾನ ಮೆರೆದ ಫ್ಯಾನ್ಸ್​​

ಒಟ್ಟಾರೆ ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡು, ಕಷ್ಟದ ದಿನಗಳನ್ನು ಮೆಟ್ಟಿ ಸ್ಯಾಂಡಲ್​​ವುಡ್​ ಬಾದ್ ​ಷಾ ಎನಿಸಿಕೊಂಡಿರುವ ಕಿಚ್ಚ ಸುದೀಪ್ ಸಿನಿಮಾ ಜರ್ನಿಗೆ 28 ವರ್ಷ. ಈ ಖುಷಿಯನ್ನ ಕಿಚ್ಚ ಸುದೀಪ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನನ್ನ ಯಶಸ್ಸಿನಲ್ಲಿ ಭಾಗಿಯಾಗಿರೋ ಪ್ರತಿಯೊಬ್ಬರಿಗೂ ತಮ್ಮ ಹೃದಯಪೂರ್ವಕ ಕೃತಜ್ಞತೆಗಳನ್ನು ಅರ್ಪಿಸಿರುವ ಕಿಚ್ಚ ಎಲ್ಲವೂ ಅವಿಸ್ಮರಣೀಯ ಕ್ಷಣಗಳು ಅಂತಾ ಬರೆದುಕೊಂಡಿದ್ದಾರೆ.

ABOUT THE AUTHOR

...view details