ರವಿ ಬಸ್ರೂರ್ ಕನ್ನಡ ಚಿತ್ರರಂಗದ ಬಹುಬೇಡಿಕೆಯ ಸಂಗೀತ ನಿರ್ದೇಶಕರಲ್ಲೋರ್ವರು. ಕೆಜಿಎಫ್ ಸರಣಿ ಸಿನಿಮಾ ಮೂಲಕ ಬಹುದೊಡ್ಡ ಯಶಸ್ಸು ಕಂಡಿರುವ ಇವರು ಬಾಲಿವುಡ್, ಟಾಲಿವುಡ್ಗೂ ಕಾಲಿಟ್ಟು ಸ್ಟಾರ್ ಹೀರೋಗಳ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಇವರ ಗರಡಿಯಿಂದ ಬಂದ ಸಾಕಷ್ಟು ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿ ಒಳ್ಳೆ ಹೆಸರು ಮಾಡುತ್ತಿದ್ದಾರೆ. ಇದೀಗ ಯುವ ಸಿನಿಮೋತ್ಸಾಹಿಗಳು ಸ್ಯಾಂಡಲ್ವುಡ್ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಸೂಚನ್ ಶೆಟ್ಟಿ ಅವರೀಗ ನಿರ್ದೇಶಕರಾಗಿ ಹೊಸ ಪಯಣ ಪ್ರಾರಂಭಿಸಿದ್ದಾರೆ.
ಹೌದು, ಸೂಚನ್ ಶೆಟ್ಟಿ ಅವರೀಗ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ತಮ್ಮ ಚೊಚ್ಚಲ ಪ್ರಯತ್ನದ ಸಿನಿಮಾಗೆ 'ಗಾಡ್ ಪ್ರಾಮಿಸ್' ಎಂಬ ಕ್ಯಾಚಿ ಟೈಟಲ್ ಇಟ್ಟಿದ್ದಾರೆ. ರವಿ ಬಸ್ರೂರ್ ಸಾರಥ್ಯದ ಕಟಕ, ಗಿರ್ಮಿಟ್, ಕಡಲ್ ಸಿನಿಮಾಗಳಿಗೆ ಬಹರಗಾರನಾಗಿ, ಸಹ ನಿರ್ದೇಶಕನಾಗಿ, ನಟನಾಗಿ ಕೆಲಸ ಮಾಡಿರುವ ಸೂಚನ್, ತಮ್ಮ ಈ ಅನುಭವದೊಂದಿಗೆ ನಿರ್ದೇಶನದ ಸಾಹಸಕ್ಕೆ ಕೈ ಹಾಕಿದ್ದಾರೆ. 2022ರ ಕೊನೆಯಲ್ಲಿ ಧೂಳೆಬ್ಬಿಸಿದ್ದ ಪ್ಯಾನ್ ಇಂಡಿಯಾ 'ಕಾಂತಾರ' ಸಿನಿಮಾದಲ್ಲಿ ಫಾರೆಸ್ಟ್ ಗಾರ್ಡ್ ರವಿ ಪಾತ್ರದಲ್ಲಿ, ರವಿ ಬಸ್ರೂರ್ ಅವರ ಕಡಲ್ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿರುವ ಸೂಚನ್ ಶೆಟ್ಟಿ 'ಗಾಡ್ ಪ್ರಾಮಿಸ್' ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ.
ನಮ್ಮ ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವಂತಹ ಸಿನಿಮಾ ಮಾಡುವ ಕನಸಿನೊಂದಿಗೆ 2016ರಲ್ಲಿ ಶುರುವಾದ ಮೈತ್ರಿ ಪ್ರೊಡಕ್ಷನ್ ಸೂಚನ್ ಶೆಟ್ಟಿ ಅವರ ಚೊಚ್ಚಲ ಕನಸಿಗೆ ಜೊತೆಯಾಗಿದೆ. ಗಾಡ್ ಪ್ರಾಮಿಸ್ ಸಿನಿಮಾವನ್ನು ಮೈತ್ರಿ ಪ್ರೊಡಕ್ಷನ್ ನಡಿ ಮೈತ್ರಿ ಮಂಜುನಾಥ್ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಕರಾವಳಿಯ ಭೂಗತ ಕಥೆ ಹಫ್ತಾ ಸಿನಿಮಾವನ್ನು ನಿರ್ಮಿಸಿದ್ದ ಈ ಪ್ರೊಡಕ್ಷನ್ನ ಎರಡನೇ ಕಾಣಿಕೆ 'ಗಾಡ್ ಪ್ರಾಮಿಸ್'. ಹಳ್ಳಿ ಸೊಗಡನ್ನು ಬಿಂಬಿಸುವ ಟೈಟಲ್ ಪೋಸ್ಟರ್ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.