ಭಾರತೀಯ ಚಿತ್ರರಂಗದ ದಿಗ್ಗಜ ನಿರ್ದೇಶಕ ಎಸ್.ಎಸ್ ರಾಜಮೌಳಿ ಜಪಾನ್‌ನಲ್ಲಿ ನಡೆಯುತ್ತಿರುವ 'ಆರ್‌ಆರ್‌ಆರ್' ವಿಶೇಷ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ. ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅಭಿನಯದ ಬ್ಲಾಕ್ಬಸ್ಟರ್ ಚಿತ್ರ ಆರ್ಆರ್ಅರ್ 513 ದಿನಗಳಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.
2022ರ ಮಾರ್ಚ್ 24ರಂದು ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಜಾಗತಿಕವಾಗಿ ತೆರೆಗಪ್ಪಳಿಸಿತ್ತು. 2023ರಲ್ಲಿ, ಎರಡು ಗೋಲ್ಡನ್ ಗ್ಲೋಬ್ ಮತ್ತು ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಎಂಎಂ ಕೀರವಾಣಿ ಅವರ ನಾಟು ನಾಟು ಹಾಡಿಗೆ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಜಾಗತಿಕವಾಗಿ ಈ ಸಿನಿಮಾ ಸಖತ್ ಸದ್ದು ಮಾಡಿದೆ. ಸದ್ಯ ಜಪಾನ್‌ನಲ್ಲಿ ಸ್ಪೆಷಲ್ ಸ್ಕ್ರೀನಿಂಗ್ ನಡೆಯುತ್ತಿದೆ.
ಈ ಅಭೂತಪೂರ್ವ ಯಶಸ್ಸಿನ ಭಾಗವಾಗಲು ನಿರ್ದೇಶಕರು ಜಪಾನ್‌ಗೆ ಭೇಟಿ ನೀಡಿದ್ದಾರೆ. ಈ ವೇಳೆ, ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದವರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ತಮ್ಮ ಅಭಿಮಾನಿಗಳ ಜೊತೆ ಮಾತನಾಡುವ ವೇಳೆ, ರಾಜಮೌಳಿ ಅವರು ಮಹೇಶ್ ಬಾಬು ಜೊತೆಗಿನ ತಮ್ಮ ಚಿತ್ರದ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಬಾಹುಬಲಿ ಸರಣಿ, ಆರ್‌ಆರ್‌ಆರ್ ಅಂತಹ ಬ್ಲಾಕ್ಬಸ್ಟರ್ ಸಿನಿಮಾಗಳಿಗೆ ಹೆಸರುವಾಸಿಯಾಗಿರೋ ಎಸ್.ಎಸ್ ರಾಜಮೌಳಿ ಅವರ ಮುಂದಿನ ಚಿತ್ರಗಳ ಮೇಲೆ ಅಪಾರ ಸಂಖ್ಯೆಯ ಸಿನಿಪ್ರಿಯರು ಮಾತ್ರವಲ್ಲದೇ ಸಿನಿಗಣ್ಯರೂ ಸಹ ಸಾಕಷ್ಟು ಕುತೂಹಲವನ್ನಿಟ್ಟುಕೊಂಡಿದ್ದಾರೆ.