ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಈ ವಿಶೇಷ ದಿನಕ್ಕೆ ದಿಯಾ ಹಾಗೂ ದಸರಾ ಸಿನಿಮಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅಭಿನಯದ 'ಬ್ಲಿಂಕ್' ಚಿತ್ರತಂಡ ವಿಶೇಷವಾಗಿ ಶುಭಕೋರಿದೆ.
'ಬ್ಲಿಂಕ್' ಚಿತ್ರತಂಡ ಚಿತ್ರೀಕರಣದ ದಿನದಿಂದಲೂ ತಮ್ಮ ವಿನೂತನ ಪ್ರಚಾರ ತಂತ್ರಗಳಿಂದ ಚಂದನವನದಲ್ಲಿ ಗಮನ ಸೆಳೆದಿದೆ. ತಮ್ಮ ಸಿನಿಮಾವನ್ನು ಜನರಿಗೆ ಮುಟ್ಟಿಸುವಲ್ಲಿ ಗೆಲ್ಲಲೇಬೇಕು ಎಂದು ಶಪಥ ಮಾಡಿರುವ ಈ ತಂಡ, ಯಾವುದೇ ಮುಚ್ಚುಮರೆ ಇಲ್ಲದೇ, 'ನೂತನ ಚಿತ್ರಗಳನ್ನು ಕಟ್ಟುವಲ್ಲಿ, ಜನರಿಗೆ ತಲುಪಿಸುವಲ್ಲಿ ಇರುವ ಸಮಸ್ಯೆ'ಗಳನ್ನು ತಿಳಿಸಲು ವಿನೂತನ ಪ್ರಯೋಗ ಮಾಡಿದೆ. "ಜನರಿಂದಲೇ ಸಿನಿಮಾ, ಜನರೇ ಸಿನಿಮಾ" ಎಂಬ ವಿಶಿಷ್ಟ ಸಾಲುಗಳೀಗ ಜನರ ಮನಸ್ಸನ್ನು ಗೆಲ್ಲುತ್ತಿವೆ. ಚಿತ್ರಮಂದಿರದಿಂದ ದೂರ ಉಳಿದಿರುವ ಜನರಿಗೆ, ಆ ಮಾಂತ್ರಿಕ ಜಗತ್ತಿನ ವಿಶೇಷತೆಯನ್ನು ಮನ ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ.
'ಬ್ಲಿಂಕ್' ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ವಿಡಿಯೋ ಹಂಚಿಕೊಂಡಿದೆ. ನಟ ದೀಕ್ಷಿತ್ ಶೆಟ್ಟಿ ಕುಳಿತು ಮಾತನಾಡಿರುವ ಈ ವಿಡಿಯೋ ಬಹಳ ಅದ್ಭುತವಾಗಿದೆ. ಪ್ರತೀ ಸಾಲುಗಳು, ನಟನ ದನಿ, ವಿಷಯವನ್ನು ರವಾನಿಸಿರುವ ರೀತಿ ಬಹಳ ಚೆನ್ನಾಗಿದೆ ಅಂತಾರೆ ನೆಟ್ಟಿಗರು. ಈ ವಿಡಿಯೋವನ್ನು ದೀಕ್ಷಿತ್ ಶೆಟ್ಟಿ ಸಹ ತಮ್ಮ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಹಂಚಿಕೊಂಡಿದ್ದು, ''ಜನರಿಂದಲೇ ದೇಶ, ಜನರಿಂದಲೇ ಸಿನಿಮಾ. ಜನರೇ ದೇಶ, ಜನರೇ ಸಿನಿಮಾ. ಚಿತ್ರಮಂದಿರದಲ್ಲಿ ಸಿಗೋಣ. ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು'' ಎಂದು ಬರೆದುಕೊಂಡಿದ್ದಾರೆ.
ಶ್ರೀನಿಧಿ ಬೆಂಗಳೂರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ನಿರ್ದೇಶನದ ಚೊಚ್ಚಲ ಚಿತ್ರ. ಟೀಸರ್ ಹಾಗೂ ಹಾಡುಗಳ ಮೂಲಕ ಜನಮನ ಗೆದ್ದಿರುವ ನಿರ್ದೇಶಕ ಶ್ರೀನಿಧಿ ಬೆಂಗಳೂರು, ಇದೊಂದು ಕಾಲ್ಪನಿಕ ಕಥೆ. ಕನ್ನಡ ಚಿತ್ರರಂಗದಲ್ಲಿ ಈ ಪ್ರಕಾರದ ಚಿತ್ರಗಳು ತೀರಾ ಕಡಿಮೆ ಸಂಖ್ಯೆಯಲ್ಲಿ ತೆರೆಕಂಡಿವೆ. ಈ ಚಿತ್ರವು ನೋಡುಗರಲ್ಲಿ ಹೊಸತನ ಮೂಡಿಸುತ್ತದೆ ಎಂದು ತಿಳಿಸಿದ್ದಾರೆ.