ಯಾವಾಗ ಮದುವೆ? ಅನ್ನೋದು ಕನ್ನಡ ಚಿತ್ರರಂಗದ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಅವರಿಗೆ ಬಹುಸಮಯದಿಂದ ಎದುರಾಗುತ್ತಿದ್ದ ಪ್ರಶ್ನೆ. ಫೈನಲಿ, ಚಂದನವನದ ಖ್ಯಾತ ನಟ ದಾಂಪತ್ಯ ಜೀವನಕ್ಕೆ ಹೆಜ್ಜೆಯಿಟ್ಟು ಕೋಟ್ಯಂತರ ಅಭಿಮಾನಿಗಳ ಖುಷಿಗೆ ಕಾರಣರಾಗಿದ್ದಾರೆ. ಫೆಬ್ರವರಿ 16, ಭಾನುವಾರದಂದು ಮನ ಮೆಚ್ಚಿದ ಹುಡುಗಿ ಧನ್ಯತಾ ಅವರ ಜೊತೆ ಬಹಳ ಅದ್ಧೂರಿಯಾಗಿ ಹಸೆಮಣೆ ಏರಿದ್ದಾರೆ. ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆದ ಅದ್ಧೂರಿ ಸಮಾರಂಭಕ್ಕೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು, ರಾಜಕಾರಣಿಗಳು, ವಿವಿಧ ಕ್ಷೇತ್ರದ ಗಣ್ಯರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರಿದ್ದರು. ಇದೀಗ ಸರ್ವರಿಗೂ ನಟ ಹೃದಯಪೂರ್ವಕ ನಮನ ಸಲ್ಲಿಸಿದ್ದಾರೆ.
ಅದ್ಧೂರಿ ವಿವಾಹ ಸಮಾರಂಭದ ಬಳಿಕ ಹಂಚಿಕೊಂಡ ಮೊದಲ ಪೋಸ್ಟ್ ಇದಾಗಿದೆ. ಕೃತಜ್ಞತೆ ಸಲ್ಲಿಕೆಗಾಗಿ ಹಂಚಿಕೊಂಡಿರುವ ಪೋಸ್ಟ್ ಇದು. ಮದುವೆ ಕಾರ್ಯಕ್ರಮದ ಬಳಿಕ ಅಭಿಮಾನಿಗಳೆದುರು ನಿಂತು ನಮಿಸಿರುವ, ಅಡ್ಡ ಬಿದ್ದು ಧನ್ಯವಾದ ಸಲ್ಲಿಸಿರುವ ಫೋಟೋವನ್ನು ಇಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ತಮ್ಮ ಮನದಾಳವನ್ನೂ ಹಂಚಿಕೊಂಡಿದ್ದಾರೆ.
ಪೋಸ್ಟ್ನಲ್ಲೇನಿದೆ?''ಎಲ್ಲರಿಗೂ ನಮಸ್ಕಾರ, ಮದುವೆಗೆ ಬಂದು ಹರಸಿದ, ಬರಲಾಗದೇ ಇದ್ದರೂ ಶುಭಾಶಯಗಳನ್ನು ತಿಳಿಸಿದ ಎಲ್ಲರಿಗೂ ಹೃದಯಪೂರ್ವಕ ನಮನಗಳು. ಯಾವುದೇ ತೊಂದರೆ ಆಗದೇ ಸಮಾರಂಭ ಚೆನ್ನಾಗಿ ಆಗುವಲ್ಲಿ ಕುಟುಂಬದ ಜೊತೆ ಸ್ನೇಹಿತರು, ನೆಂಟರು, ಇಷ್ಟರು, ಮಾಧ್ಯಮ, ಪೊಲೀಸ್ ಇಲಾಖೆ, ಕಾರ್ಮಿಕರು, ಅಭಿಮಾನಿಗಳಾದಿಯಾಗಿ ಸಾಕಷ್ಟು ಜನರ ಶ್ರಮವಿದೆ. ಎಲ್ಲರಿಗೂ ತುಂಬು ಅಭಿಮಾನದ ಕೃತಜ್ಞತೆಗಳು. ತುಂಬ ಜನ ಸೇರಿದ್ದರಿಂದ, ಕೆಲವರಿಗೆ ನಮ್ಮನ್ನು ತಲುಪಲು ತೊಂದರೆಯುಂಟಾಗಿದ್ದಲ್ಲಿ, ತಲುಪಲು ಸಾಧ್ಯವಾಗಿರದಿದ್ದಲ್ಲಿ ದಯವಿಟ್ಟು ಕ್ಷಮೆಯಿರಲಿ. ಖಂಡಿತವಾಗಿಯೂ ಇನ್ನಷ್ಟು ಒಳ್ಳೆ ವಿಷಯಗಳೊಂದಿಗೆ ಮತ್ತೆ ಸಿಗುತ್ತೇವೆ. ಆಶೀರ್ವಾದವಿರಲಿ. ಇಷ್ಟೆಲ್ಲದರ ಮಧ್ಯೆ ಬಂದು ಹರಸಿದ ನನ್ನ ಚಿತ್ರರಂಗದ ಗೆಳೆಯರು, ತಾರೆಯರು, ಕಾರ್ಮಿಕರು ಹಾಗೂ ನಮಗಾಗಿ ಕೆಲಸಕ್ಕೆ ನಿಂತ ಪ್ರೊಡಕ್ಷನ್ ಮ್ಯಾನೇಜರ್ಸ್ ತಂಡಕ್ಕೆ, ಒಟ್ಟಾಗಿ ನನ್ನ ಚಿತ್ರರಂಗದ ಕುಟುಂಬಕ್ಕೆ ಹೃಯಪೂರ್ವಕ ನಮನಗಳು. ಮದುವೆಯ ಮೆರಗು ಹೆಚ್ಚಿಸಿದ ಪ್ರೀತಿಯ ಅಭಿಮಾನಿಗಳಿಗೆ ಸ್ಪೆಷಲ್ ಥ್ಯಾಂಕ್ಸ್. ತಾಯಿ ಚಾಮುಂಡೇಶ್ವರಿಗೆ ಭಕ್ತಿಪೂರ್ವಕ ನಮನಗಳು'' ಎಂದು ಬರೆದುಕೊಂಡಿದ್ದಾರೆ.