ತಮಿಳು ಚಿತ್ರರಂಗದ ಖ್ಯಾತ ನಟ ಶಿವಕಾರ್ತಿಕೇಯನ್ ಕಳೆದ ಶನಿವಾರ ಗೋವಾದಲ್ಲಿ ನಡೆದ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (ಐಎಫ್‌ಎಫ್‌ಐ)ಗೆ ಸಾಕ್ಷಿಯಾಗಿದ್ದರು. "ಫ್ರಂ ಸ್ಮಾಲ್ ಸ್ಕ್ರೀನ್ ಟು ಬಿಗ್ ಡ್ರೀಮ್ಸ್" ಎಂಬ ಮಾಸ್ಟರ್‌ಕ್ಲಾಸ್‌ನಲ್ಲಿ ಅತಿಥಿಯಾಗಿ ಭಾಗವಹಿಸಿದರು. ಈ ಸೆಷನ್ನಲ್ಲಿ ಶಿವಕಾರ್ತಿಕೇಯನ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಯಶ್ ಅವರನ್ನು ಶ್ಲಾಘಿಸಿದರು. ಕನ್ನಡ ಚಿತ್ರರಂಗಕ್ಕೆ ಯಶ್ ಅವರ ಅಪಾರ ಕೊಡುಗೆಗಳ ಬಗ್ಗೆ ಮಾತನಾಡಿ ಗೌರವ ಸೂಚಿಸಿದರು.
ಸಣ್ಣ ಪರದೆಯಿಂದಲೇ ನಟನೆ ಪ್ರಾರಂಭ:ಕಿರುತೆರೆಯಿಂದ ವೃತ್ತಿಜೀವನ ಪ್ರಾರಂಭಿಸಿದ ಶಿವಕಾರ್ತಿಕೇಯನ್ ಪ್ರಯಾಣವು ಯಶ್ ಪ್ರಯಾಣದೊಂದಿಗೆ ಆಳ ಸಂಪರ್ಕ ಹೊಂದಿದೆ. ಏಕೆಂದರೆ ಇಬ್ಬರೂ ಸಣ್ಣ ಪರದೆಯಿಂದಲೇ ನಟನೆ ಪ್ರಾರಂಭಿಸಿ ಇದೀಗ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಸಾಧನೆಗೈಯುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಕಾರ್ತಿಕೇಯನ್ ಹೇಳಿದ್ದಿಷ್ಟು:ಸೆಷನ್ನಲ್ಲಿ ಮಾತನಾಡಿದ ಶಿವಕಾರ್ತಿಕೇಯನ್, "ನಾನು ಎಲ್ಲರ ಕೆಲಸವನ್ನು ಇಷ್ಟ ಪಡುತ್ತೇನೆ. ಒಂದೊಳ್ಳೆ ಸಿನಿಮಾ ಬಂದಾಗಲೆಲ್ಲಾ ವೀಕ್ಷಿಸುತ್ತೇನೆ. ಜೊತೆಗೆ ಅವರ ಕೆಲಸವನ್ನು ಗೌರವಿಸುತ್ತೇನೆ. ಆದ್ರೆ, ಕನ್ನಡ ಚಿತ್ರರಂಗಕ್ಕೆ ಯಶ್ ಅವರ ಕೊಡುಗೆ ಅದ್ಭುತ. 'ಕೆಜಿಎಫ್ 1' ಕನ್ನಡ ಚಿತ್ರರಂಗದ ಯಶಸ್ಸು. ಆದರೆ 'ಕೆಜಿಎಫ್ 2' ಭಾರತೀಯ ಚಿತ್ರರಂಗದ ಯಶಸ್ಸು'' ಎಂದು ಗುಣಗಾನ ಮಾಡಿದರು.
ಯಶ್ ಶ್ಲಾಘನೆಗೆ ಅರ್ಹ:ಮನರಂಜನಾ ಕ್ಷೇತ್ರಕ್ಕೆ ಯಶ್ ಅವರ ಕೊಡುಗೆ ಕುರಿತು ಮಾತನಾಡಿದ ಅವರು, ''ಯಶ್ ಅವರ ಸಿನಿಮಾಗಳು ಶ್ಲಾಘನೆಗೆ ಅರ್ಹ. ಅವರು ತಮ್ಮ ಬೆಳವಣಿಗೆ ಜೊತೆಗೆ ಚಿತ್ರರಂಗಕ್ಕೆ ಹೊಸ ದಿಕ್ಕನ್ನೂ ನೀಡಿದ್ದಾರೆ. ನಾನು ಯಾವಾಗಲೂ ಯಶ್ ಅವರ ಕೆಲಸವನ್ನು ಮೆಚ್ಚುತ್ತೇನೆ. ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸುತ್ತೇನೆ'' ಎಂದು ತಿಳಿಸಿದ್ದಾರೆ.