ಕನ್ನಡ ಚಿತ್ರರಂಗದಲ್ಲಿ ಕಮರ್ಷಿಯಲ್ ಸಿನಿಮಾಗಳ ನಡುವೆ ಭಕ್ತಿ ಪ್ರಧಾನ ಚಿತ್ರಗಳು ಇತ್ತೀಚೆಗೆ ತೆರೆಗೆ ಬರುತ್ತಿರುವುದು ಬಹಳ ಕಡಿಮೆ. ಈ ಮಧ್ಯೆ 'ಸಿಂಹರೂಪಿಣಿ' ಎಂಬ ಟೈಟಲ್ ಇಟ್ಟುಕೊಂಡು ಚಿತ್ರವೊಂದು ಬಿಡುಗಡೆಯಾಗಿದೆ. ಕೆಜಿಎಫ್ ಚಿತ್ರದಲ್ಲಿ ತಾಯಿಯ ಹಾಡು ಬರೆದು ಪ್ರಖ್ಯಾತಿ ಹೊಂದಿದ್ದ ಗೀತ ರಚನೆಕಾರ ಕಿನ್ನಾಳ್ ರಾಜ್ ಈ ಹಾಡುಗಳನ್ನು ಬರೆಯುವ ಜೊತೆಗೆ ಚಿತ್ರದ ನಿರ್ದೇಶನಕ್ಕೂ ಕೈಹಾಕಿದ್ದಾರೆ.
ಈ ಚಿತ್ರದಲ್ಲಿ ದೇವಿಯು ಮಹಾಲಕ್ಷ್ಮೀ ರೂಪದಲ್ಲಿ ಮಾರಮ್ಮ ಏಕೆ ಆಗ್ತಾಳೆ ಎಂಬುದು ಒಂದು ಭಾಗವಾದರೆ, ರಾಕ್ಷಸರನ್ನು ಸಂಹಾರ ಮಾಡಲು ಪಾರ್ವತಿ ದೇವಿ ಏಳು ಅವತಾರಗಳಲ್ಲಿ ಬರುತ್ತಾಳೆ ಅನ್ನೋದು ಎರಡನೇ ಭಾಗ. ಕೊನೆಯ ಅವತಾರವೇ ಈ ಮಾರಮ್ಮ ದೇವಿ. ದುಷ್ಟರನ್ನು ಸಂಹಾರ ಮಾಡಿದರೆ, ನಂಬಿದ ಭಕ್ತರಿಗೆ ಅಭಯ ನೀಡುತ್ತಾಳೆ. ಭೂಮಿಗೆ ದೇವಾನುದೇವತೆಗಳು ಬರಲು ಕಾರಣವೂ ಇದೆ. ಅದೇ ರೀತಿ ಮಾರಮ್ಮ ಯರಪ್ಪನ ಹಳ್ಳಿಗೆ ಬರಲು ಕಾರಣವೇನು? ಅಲ್ಲಿನ ಜನರ ಸಂಸ್ಕೃತಿ, ಆಚಾರ ವಿಚಾರ ಇದೆಲ್ಲಾವನ್ನು 'ಸಿಂಹರೂಪಿಣಿ' ಚಿತ್ರದ ಮೂಲಕ ಹೇಳಲಾಗಿದೆ.
ದೇವಿಗೆ ಏತಕ್ಕಾಗಿ ಕೋಣ ಬಲಿ ಕೊಡುತ್ತಾರೆ? ಭಕ್ತಿ ಆಧರಿತ ಸಿನಿಮಾದಲ್ಲಿ ಪವಾಡ, ಮಹಿಮೆಗಳು ಇರುವುದು ಸಹಜ. ಅದರಂತೆ ಇದರಲ್ಲೂ ಎಲ್ಲವನ್ನೂ ಸಂದರ್ಭಕ್ಕೆ ತಕ್ಕಂತೆ ತೋರಿಸಲಾಗಿದೆ. ಎಲ್ಲಿಯೂ ಅಸಹಜ ಎನ್ನುವಂತ ದೃಶ್ಯಗಳು ಇರದೇ, ಪ್ರೇಕ್ಷಕರಿಗೆ ಮಾರಮ್ಮನ ಮೇಲೆ ಇನ್ನಷ್ಟು ಭಕ್ತಿ ಹೆಚ್ಚಾಗುವಂತಹ ಅಂಶಗಳು ಇರುವುದು ಪ್ಲಸ್ ಪಾಯಿಂಟ್. ಇದರ ಜೊತೆಗೆ ಪ್ರೀತಿಯ ಸನ್ನಿವೇಶಗಳು ಇದ್ದರೂ, ಇಬ್ಬರನ್ನು ದೇವಿಯ ಭಕ್ತರೆಂದು ಬಿಂಬಿಸಲಾಗಿದೆ. ಊರ ಗೌಡ ದೇವಿಯ ವಿರುದ್ಧ ಸಂಚನ್ನು ರೂಪಿಸಲು ಹೋದಾಗ ಏನಾಗುತ್ತೆ? ಇದರಿಂದ ಕ್ಲೈಮಾಕ್ಸ್‌ದಲ್ಲಿ ದೇವಿ ಏನು ಮಾಡುತ್ತಾಳೆ? ಇವೆಲ್ಲವೂ ಅಚ್ಚುಕಟ್ಟಾಗಿ ಸೆರೆ ಹಿಡಿಯಲಾಗಿದೆ.