ಈಕೆ ದಕ್ಷಿಣ ಚಿತ್ರರಂಗದ ಅಪ್ರತಿಮ ರೂಪಸಿ. ತೆಲುಗು, ತಮಿಳು, ಮಲಯಾಳಂ, ಹಿಂದಿ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಸುಮಾರು 230 ಚಿತ್ರಗಳಲ್ಲಿ ನಟಿಸಿದ್ದಾರೆ. ಅದ್ಭುತ ನಟನೆ ಮತ್ತು ಮೋಹಕ ನೃತ್ಯದಿಂದ ಪ್ರೇಕ್ಷಕರನ್ನು ಮೋಡಿ ಮಾಡಿರುವ ಮನಮೋಹಿನಿ. ಎರಡು ಚಿತ್ರಗಳಿಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ಇವರು ಸಿಂಗಲ್ ಮದರ್ ಆಗಿ ಜೀವನ ಸಾಗಿಸುತ್ತಿದ್ದಾರೆ.
ಹೌದು. ನಾವು ಹೇಳ ಹೊರಟಿರುವುದು ಎವರ್ ಗ್ರೀನ್ ಬ್ಯೂಟಿ ಶೋಭನಾ (Shobhana) ಬಗ್ಗೆ. ವರ್ಷಗಳ ನಂತರವೂ ತಮ್ಮ ಅಭಿನಯ ಕೌಶಲದಿಂದ ಮನಸೂರೆಗೊಳ್ಳುತ್ತಿರುವ ನಟಿಯ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.
ಬಾಲನಟಿಯಾಗಿ..:ಶೋಭನಾ ಚಂದ್ರಕುಮಾರನ್ ಪಿಳ್ಳೆ ಎಂಬುದು ಇವರ ಪೂರ್ಣ ಹೆಸರು. 1970ರ ಮಾರ್ಚ್ 21ರಂದು ಕೇರಳದ ತಿರುವನಂತಪುರದಲ್ಲಿ ಜನಿಸಿದರು. ಪ್ರಸಿದ್ಧ ನಟರು ಮತ್ತು ನೃತ್ಯಗಾರರಾದ ಲಲಿತಾ, ಪದ್ಮಿನಿ ಮತ್ತು ರಾಗಿಣಿ ಅವರ ಸಂಬಂಧಿ. ತಮ್ಮ 10ನೇ ವಯಸ್ಸಿನಲ್ಲಿ ಅಂದರೆ 1980ರಲ್ಲಿ ಕೆ.ಆರ್.ವಿಜಯ ಅಭಿನಯದ ತಮಿಳು ಚಿತ್ರ ಮಂಗಳ ನಾಯಕನ್ ಮೂಲಕ ಚಿತ್ರರಂಗ ಪ್ರವೇಶಿಸಿದರು. ಆ ನಂತರ ಮನ್ಮಧ ರಾಗಂಗಳ್ ಚಿತ್ರದಲ್ಲೂ ಕಾಣಿಸಿಕೊಂಡರು.
ಭಕ್ತ ಧ್ರುವ ಮಾರ್ಕಂಡೇಯ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದರು. 1984ರಲ್ಲಿ ಬಿಡುಗಡೆಯಾದ 'ಏಪ್ರಿಲ್ 18' ಶೀರ್ಷಿಕೆಯ ಚಿತ್ರದ ಮೂಲಕ ತಮ್ಮ 14ನೇ ವಯಸ್ಸಿನಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದರು. ಬಾಲಚಂದ್ರ ಮೆನನ್ ನಿರ್ದೇಶಿಸಿ ನಟಿಸಿದ್ದ ಈ ಚಿತ್ರದಲ್ಲಿ ಅಡೂರ್ ಭಾಸಿ ಮತ್ತು ಭರತ್ ಗೋಪಿ ಪ್ರಮುಖ ಪಾತ್ರ ಮಾಡಿದ್ದರು. ಶೋಭನಾ ಅಭಿನಯ ವಿಮರ್ಶಕರಿಂದ ಪ್ರಶಂಸೆ ಗಿಟ್ಟಿಸಿಕೊಂಡಿತ್ತು.
ನಂತರ ಬಾಲ ಕಲಾವಿದೆಯಾಗಿ ಕಮಲ್ ಹಾಸನ್ ಅವರ 'ಎನಕ್ಕುಲ್ ಒರುವನ್'ನಲ್ಲಿ ನಟಿಸಿದ್ದರು. ಈ ಚಿತ್ರ ಯಶಸ್ವಿಯಾಗದಿದ್ದರೂ, ಶೋಭಾನಾ ಅವರಿಗೆ ಅನೇಕ ತಮಿಳು ಚಿತ್ರಗಳಲ್ಲಿ ಅವಕಾಶಗಳನ್ನು ತಂದುಕೊಟ್ಟಿತು. ನಂತರ ಸತ್ಯರಾಜ್, ವಿಜಯ್ ಕಾಂತ್ ಮತ್ತು ಭಾಗ್ಯರಾಜ್ ಅವರಂತ ನಟರ ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡರು.
ಮಲಯಾಳಂ ಚಿತ್ರರಂಗದಲ್ಲಿ ಶೋಭನಾ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕನಮರಾಯತು, ಇತ್ತಿರಿ ಪೂವೆ, ಚೂವಣ್ಣ ಪೂವೆ, ನಾಡೋಡಿಕ್ಕಟ್ಟು, ವೆಳ್ಳನಕಾಳುದೆ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಸೂಪರ್ ಸ್ಟಾರ್‌ಗಳಾದ ಮೋಹನ್‌ಲಾಲ್ ಮತ್ತು ಮಮ್ಮುಟ್ಟಿ ಜೊತೆ ಶೋಭನಾ ತೆರೆಹಂಚಿಕೊಂಡರು. 1980ರ ದಶಕದಲ್ಲಿ ಟಾಪ್ ಹೀರೋಯಿನ್ಗಳಲ್ಲಿಒಬ್ಬರಾಗಿ ಜನಪ್ರಿಯರಾದರು.
ಇದೇ ವೇಳೆ, 'ವಿಕ್ರಮ್' ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯರಾದ ಇವರು ಟಾಲಿವುಡ್ ಟಾಪ್ ಹೀರೋಗಳಾದ ಚಿರಂಜೀವಿ, ನಾಗಾರ್ಜುನ, ವೆಂಕಟೇಶ್ ಜೊತೆ ತೆರೆಹಂಚಿಕೊಂಡರು. ಅಜೆಯಡು, ರುದ್ರವೀಣ, ತ್ರಿಮೂರ್ತಿಲು, ಏಪ್ರಿಲ್ 1ರಲ್ಲಿ ಕಾಣಿಸಿಕೊಂಡರು. 1990ರ ದಶಕದಲ್ಲಿ, ರಜನಿಕಾಂತ್-ಮಣಿರತ್ನಂ ಅವರ 'ದಳಪತಿ', ಚಿರಂಜೀವಿ ಜೊತೆಗಿನ 'ರೌಡಿ ಅಲ್ಲುಡು' ಮತ್ತು ವಿಷ್ಣುವರ್ಧನ್ ಜೊತೆಗಿನ 'ಶಿವಶಂಕರ್' ಚಿತ್ರಗಳಲ್ಲಿ ಅಭಿನಯಿಸಿ ಗಮನ ಸೆಳೆದರು. ಮೋಹನ್ ಲಾಲ್ ಜೊತೆ ತೆರೆಹಂಚಿಕೊಂಡ 'ಇತಿಹಾಸಂ ಮಣಿಚಿತ್ರತಾಜ' ಚಿತ್ರದಲ್ಲಿ ಶೋಭಾನಾ ಮೊದಲ ಬಾರಿಗೆ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಪಡೆದರು.
'ಮೇರೆ ಬಾಪ್ ಪೆಹ್ಲೆ ಆಪ್' ಸೇರಿದಂತೆ ಕೆಲ ಹಿಂದಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ. 2002ರಲ್ಲಿ 'ಮಿತ್ರ್ ಮೈ ಫ್ರೆಂಡ್'ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಇದು ಭಾರತೀಯ ಭಾಷೆಗಳೂ ಸೇರಿದಂತೆ ಇಂಗ್ಲಿಷ್ನಲ್ಲೂ ಮೂಡಿಬಂತು. ತಮ್ಮ ಅಮೋಘ ಅಭಿನಯಕ್ಕಾಗಿ ಅತ್ಯುತ್ತಮ ನಟಿ ವಿಭಾಗದಲ್ಲಿ ಎರಡನೇ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡರು. ಸುಮಾರು ಮೂರು ದಶಕಗಳ ಕಾಲ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಶೋಭನಾ ನಿಧಾನವಾಗಿ ನಟನೆಯಿಂದ ದೂರ ಸರಿದರು. ಅಂತಿಮವಾಗಿ ತೆಲುಗಿನಲ್ಲಿ ಮೋಹನ್ ಬಾಬು ಮತ್ತು ಮಂಚು ವಿಷ್ಣು ಅವರ 'ಗೇಮ್' ಚಿತ್ರದಲ್ಲಿ ಕಾಣಿಸಿಕೊಂಡರು. ಸಿನಿಮಾದಿಂದ ದೂರ ಉಳಿದ ಚೆಲುವೆ ನೃತ್ಯದತ್ತ ಗಮನ ಹರಿಸಿದರು. ನೃತ್ಯ ಸಂಯೋಜಕರಾಗಿ, ನರ್ತಕಿಯಾಗಿ ತಮ್ಮದೇ ಆದ ವಿಶೇಷ ಮನ್ನಣೆ ಗಳಿಸಿದ್ದಾರೆ.
ಇದನ್ನೂ ಓದಿ:ಇಂದ್ರಜಿತ್ ಲಂಕೇಶ್ ದೀರ್ಘಕಾಲದ ಸ್ನೇಹಿತ, ನಾವು ಬ್ಯಾಡ್ಮಿಂಟನ್ ಆಡ್ತಿದ್ವಿ: ಸುದೀಪ್ - Sudeep
ಅವರ ಮತ್ತೊಂದು ಗಮನಾರ್ಹ ಸಂಗತಿ ಎಂದರೆ, 54ರ ಹರೆಯದ ಶೋಭನಾ ಮದುವೆಯಾಗಿಲ್ಲ. ಸಿಂಗಲ್ ಲೈಫ್ ಸಾಗಿಸುತ್ತಿದ್ದಾರೆ. 2011ರಲ್ಲಿ ಹೆಣ್ಣು ಮಗುವನ್ನು ದತ್ತು ಪಡೆದಿದ್ದರು. ಪ್ರಸ್ತುತ, ಚೆನ್ನೈನಲ್ಲಿ ನೃತ್ಯ ಶಾಲೆಯನ್ನು ಸ್ಥಾಪಿಸುವ ಮೂಲಕ ಅನೇಕರಿಗೆ ಶಾಸ್ತ್ರೀಯ ಭರತನಾಟ್ಯ ಕಲಿಸುತ್ತಿದ್ದಾರೆ.
ಇದನ್ನೂ ಓದಿ:ವಯನಾಡು ಭಯಾನಕ ಭೂಕುಸಿತಕ್ಕೆ ಮಿಡಿದ ನಟ ಪ್ರಭಾಸ್: 2 ಕೋಟಿ ರೂ. ನೆರವು - Prabhas Donation
ಹಲವು ವರ್ಷಗಳ ನಂತರ, ಇತ್ತೀಚೆಗೆ 'ಕಲ್ಕಿ 2928 ಎಡಿ' ಮೂಲಕ ಟಾಲಿವುಡ್ಗೆ ಮರು ಪ್ರವೇಶಿಸಿದರು. ನಾಗ್ ಅಶ್ವಿನ್ ನಿರ್ದೇಶಿಸಿದ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದರು. ಸದ್ಯ ಮೋಹನ್ ಲಾಲ್ ಮತ್ತು ರಜನಿಕಾಂತ್ ಅವರ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.