'ಭೈರತಿ ರಣಗಲ್' ಶೀರ್ಷಿಕೆಯಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಹೈಪ್ ಕ್ರಿಯೇಟ್ ಆಗಿರುವ ಚಿತ್ರ. ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಎರಡು ಶೇಡ್ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ವರ್ಷದ ಬಹುನಿರೀಕ್ಷಿತ ಸಿನಿಮಾ. ಅದ್ಧೂರಿ ಮೇಕಿಂಗ್ನಿಂದ ಅಭಿಮಾನಿ ಬಳಗದಲ್ಲಿ ಕುತೂಹಲ ಹುಟ್ಟಿಸಿರೋ ಭೈರತಿ ರಣಗಲ್ ಚಿತ್ರದ ಎರಡನೇ ಹಾಡು ಅನಾವರಣಗೊಂಡಿದೆ.
ಈ ಹಿಂದೆ ಗೀತೆರಚನೆಕಾರ ಕಿನ್ನಾಳ್ ರಾಜ್ ಬರೆದಿದ್ದ ಇತಿಹಾಸವೇ ನಿಬ್ಬೆರಿಗಿಸುವ ಎತ್ತಿ ಹಿಡಿಯುವ ಮೈಲಿಗಲ್ಲು ಎಂಬ ಹಾಡನ್ನು ಮಿಲಿಯನ್ಗಟ್ಟಲೆ ಜನರು ವೀಕ್ಷಿಸಿ ಫಿದಾ ಆಗಿದ್ದರು. ಇದೀಗ ಮತ್ತೊಂದು ಎಮೋಷನಲ್ ಹಾಡು ಅನಾವರಣಗೊಂಡಿದ್ದು, ಸಿನಿಮಾ ನೋಡುವ ಕಾತರ ಹೆಚ್ಚಿಸಿದೆ.
''ದಡವಿರದ ಕಡಲಿನಲ್ಲಿ, ಬುಡವಿರದ ಹಡಗುಗಳು ಗುರಿ ಇರದೇ ನಲೆ ಸಿಗದೇ ಮುಳುಗುತ್ತಿವೆ, ದುಗಡಗಳ ಆರ್ಭಟಕ್ಕೆ ಸುಡುತ್ತಿರುವ ಸಂಕಟಕ್ಕೆ ತಡೆಯಾಜ್ಞೆ ತಂದವನು ಯಾರಿವನು ಕಾವಲಿಗ..ಕಾವಲಿಗ...ನಂಬಿಕೆಯ ಕಾವಲಿಗ'' ಅಂತಾ ಶುರುವಾಗುವ ಈ ಹಾಡು ಬಡವರ ಕಷ್ಟಗಳ ಬಗ್ಗೆ ಹೇಳುತ್ತಿದೆ. ಯುವ ಪ್ರತಿಭೆ ಸಾಯಿ ಸರ್ವೇಶ್ ಈ ಹಾಡನ್ನು ಬರೆದಿದ್ದು, ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ. ರವಿ ಬಸ್ರೂರ್ ಕ್ಯಾಚೀ ಟ್ಯೂನ್ ಹಾಕಿದ್ದಾರೆ.
2017ರ ಡಿಸೆಂಬರ್ 1ರಂದು ತೆರೆಕಂಡು ಸೂಪರ್ ಹಿಟ್ ಆಗಿದ್ದ ಮಫ್ತಿ ಸಿನಿಮಾದ ಪ್ರೀಕ್ವೆಲ್ ಈ 'ಭೈರತಿ ರಣಗಲ್'. ಈ ಸಿನಿಮಾ ಸ್ಯಾಂಡಲ್ವುಡ್ ಮಾತ್ರವಲ್ಲದೇ, ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಕುತೂಹಲ ಹುಟ್ಟಿಸಿದೆ. ಶಿವರಾಜ್ಕುಮಾರ್ ಪಾತ್ರದ ಮೇಲೆ ನಿರೀಕ್ಷೆ, ಕುತೂಹಲ ಕೂಡಾ ಜೋರಾಗಿದೆ. ಇದೀಗ ಈ ಕಾವಲಿಗ ಹಾಡು ಅಭಿಮಾನಿಗಳ ಕುತೂಹಲ, ನಿರೀಕ್ಷೆಗಳನ್ನು ದುಪ್ಪಟ್ಟುಗೊಳಿಸಿದೆ.