ಇತ್ತೀಚೆಗೆ ಮುಂಬೈನ ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ ಅವರ ನಿವಾಸದಲ್ಲಿ ನಡೆದಿರೋ ಘಟನೆ ಬಗ್ಗೆ ಬಾಲಿವುಡ್ ಬಹುಬೇಡಿಕೆ ನಟ ಶಾಹಿದ್ ಕಪೂರ್ ಪ್ರತಿಕ್ರಿಯಿಸಿದ್ದಾರೆ. ಶಾಹಿದ್ ತಮ್ಮ ಮುಂಬರುವ 'ದೇವ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಘಟನೆಯನ್ನು 'ಶಾಕಿಂಗ್' ಎಂದು ಉಲ್ಲೇಖಿಸಿದ್ದಾರೆ. ಜೊತೆಗೆ, ಸೈಫ್ ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
ಸೈಫ್ಗೆ ಚಾಕುವಿನಿಂದ ಇರಿದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಬ್ ವಿ ಮೆಟ್ ನಟ, "ನಾವೆಲ್ಲರೂ ಚಿಂತಿತರಾಗಿದ್ದೇವೆ. ಸೈಫ್ ಅವರ ಆರೋಗ್ಯ ಸುಧಾರಿಸಲಿ ಎಂದು ನಾವು ಆಶಿಸುತ್ತೇವೆ. ನಡೆದಿರೋ ಘಟನೆ ನಿಜಕ್ಕೂ ಶಾಕಿಂಗ್. ಮುಂಬೈನಲ್ಲಿ ಇಂಥ ಒಂದು ಘಟನೆ ನಡೆಯಬಹುದು ಎಂಬುದನ್ನು ಅರಗಿಸಿಕೊಳ್ಳೋದು ತುಂಬಾನೇ ಕಷ್ಟ. ಪೊಲೀಸರು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ ಎಂಬುದು ಖಚಿತ. ಸಾಮಾನ್ಯವಾಗಿ, ಮುಂಬೈನಲ್ಲಿ ಇಂತಹ ಘಟನೆಗಳು ನಡೆಯುವುದಿಲ್ಲ. ಮುಂಬೈ ಅತ್ಯಂತ ಸುರಕ್ಷಿತ ಸ್ಥಳ. ನಿಮ್ಮ ಕುಟುಂಬದ ಸದಸ್ಯರು ಬೆಳಗಿನ ಜಾವ 2 ಅಥವಾ 3 ಗಂಟೆಗೆ ಹೊರಗೆ ಇದ್ದರೂ ಅವರು ಸುರಕ್ಷಿತವಾಗಿರುತ್ತಾರೆ ಎಂಬುದನ್ನು ಬಹಳ ಹೆಮ್ಮೆಯಿಂದ ಹೇಳುತ್ತೇನೆ" ಎಂದು ತಿಳಿಸಿದರು.
ಐಸಿಯುನಿಂದ ವಿಶೇಷ ವಾರ್ಡ್‌ಗೆ ಶಿಫ್ಟ್:ಸೈಫ್ ಅಲಿ ಖಾನ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಇಂದು ಅವರನ್ನು ಐಸಿಯುನಿಂದ ವಿಶೇಷ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಅವರ ಆರೋಗ್ಯ ಸುಧಾರಿಸಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ.