ಮನುಷ್ಯನಿಗೆ ಸೂಕ್ತ ಶಿಕ್ಷಣ ಅತ್ಯಗತ್ಯ. ಆ ಶಿಕ್ಷಣದಲ್ಲೇ ಈಗ ಸಾಕಷ್ಟು ಹಗರಣಗಳು ನಡೆಯುತ್ತಿವೆ. ಅಂತಹ 'Scam'ಗಳನ್ನು ಎತ್ತಿ ಹಿಡಿಯುವ ಕಥಾಹಂದರ ಹೊಂದಿರುವ 'Scam 1770' ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಗಿದೆ. ಪ್ರತೀ ದಿನ ಬೆಳಗ್ಗೆ ಎಲ್ಲರ ಮನೆಗೂ ಪೇಪರ್ ಹಾಕಿ, ವಿದ್ಯಾಭ್ಯಾಸ ಮಾಡುತ್ತಿರುವ ಆದರ್ಶ್ ಅವರಿಂದ ಟ್ರೇಲರ್ ಬಿಡುಗಡೆ ಮಾಡಿಸಿದೆ ಚಿತ್ರತಂಡ.
ವಿಕಾಸ್ ಪುಷ್ಪಗಿರಿ ನಿರ್ದೇಶಿಸಿರುವ ಚಿತ್ರದ ಪ್ರಮುಖ ಪಾತ್ರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಖ್ಯಾತಿಯ ರಂಜನ್ ನಟಿಸಿದ್ದಾರೆ. ಟ್ರೇಲರ್ ರಿಲೀಸ್ ಈವೆಂಟ್ನಲ್ಲಿ ಚಿತ್ರತಂಡ ತಮ್ಮ ಚಿತ್ರದ ಅನುಭವಗಳನ್ನು ಹಂಚಿಕೊಂಡಿತು.
ನಿರ್ದೇಶಕ ವಿಕಾಸ್ ಪುಷ್ಪಗಿರಿ ಮಾತನಾಡಿ, "ಪ್ರಸ್ತುತ ಶಿಕ್ಷಣ ವ್ಯವಸ್ಥೆ ಕುರಿತಾದ ಚಿತ್ರ 'SCAM 1770'. ಇಂದು ಶಿಕ್ಷಣ ವ್ಯವಹಾರ ಆಗಿಹೋಗಿದೆ. ಆ ರೀತಿ ಆಗಬಾರದು. ಯಾವ ಅಭ್ಯಾಸ ತಪ್ಪಿದರೂ ಬದುಕಬಹುದು. ಆದರೆ ವಿದ್ಯಾಭ್ಯಾಸ ತಪ್ಪಿದರೆ ಬದುಕುವುದು ಕಷ್ಟ. ವಿದ್ಯಾಭ್ಯಾಸ ಇಂದು ಬಡವರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ದುಬಾರಿಯಾಗಿದೆ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ತೋರಿಸುವ ಪ್ರಯತ್ನವನ್ನು ನಮ್ಮ ಚಿತ್ರದಲ್ಲಿ ಮಾಡಿದ್ದೇವೆ. ವಿದ್ಯಾರ್ಥಿಗಳು ಹಾಗೂ ಪೋಷಕರು ತಪ್ಪದೇ ನೋಡಬೇಕಾದ ಸಿನಿಮಾ. ಮೊದಲಿನಿಂದಲೂ ಸದಭಿರುಚಿಯ ಚಿತ್ರಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ನಿರ್ಮಾಪಕ ದೇವರಾಜ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ" ಎಂದು ಮಾಹಿತಿ ಹಂಚಿಕೊಂಡರು.