ಶಿಡ್ಲಘಟ್ಟದ ರೇಶ್ಮೆ ಬೆಳೆಗಾರರು ಎದುರಿಸುತ್ತಿರುವ ಹಲವು ಸಮಸ್ಯೆಗಳ ಜತೆಗೊಂದು ಅದ್ಭುತ ಪ್ರೇಮ ಕಾವ್ಯವನ್ನು ನಿರ್ದೇಶಕ ನಾಗಶೇಖರ್ ಅವರು "ಸಂಜು ವೆಡ್ಸ್ ಗೀತಾ 2" ಮೂಲಕ ಬೆಳ್ಳಿತೆರೆ ಮೇಲೆ ಹೇಳಹೊರಟಿದ್ದಾರೆ. ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಈ ಚಿತ್ರ ಜ.10ರಂದು ಅಂದರೆ ನಾಳೆ ಕರ್ನಾಟಕ ಅಲ್ಲದೇ ವಿದೇಶಗಳಲ್ಲೂ ಸಹ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.
ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಚಲವಾದಿ ಕುಮಾರ್ ನಿರ್ಮಿಸಿರುವ ಸಿನಿಮಾಗೆ ನಾಗಶೇಖರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕನ್ನಡ ಚಿತ್ರರಂಗದ ಬಹುಬೇಡಿಕೆ ತಾರೆಯರಾದ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ತೆರೆ ಹಂಚಿಕೊಂಡಿದ್ದಾರೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಈಗಾಗಲೇ ಸಂಗೀತಪ್ರಿಯರ ಮನಗೆದ್ದಿದ್ದು, ಸಿನಿಮಾ ನೋಡುವ ಪ್ರೇಕ್ಷಕರ ಕುತೂಹಲ ಹೆಚ್ಚಿದೆ.
ಚಿತ್ರದ ಮೊದಲ ಭಾಗ 2011ರ ಏಪ್ರಿಲ್ 1ರಂದು ತೆರೆಕಂಡು ಯಶಸ್ವಿಯಾಗಿತ್ತು. ಸಿನಿಮಾದ ಹಾಡುಗಳು ದೊಡ್ಡ ಮಟ್ಟದಲ್ಲೇ ಸದ್ದು ಮಾಡಿದ್ದವು. ಚಿತ್ರದ ಹಾಡುಗಳು ಈಗಲೂ ಅಷ್ಟೇ ಜನಪ್ರಿಯವಾಗಿದ್ದು, ಸೀಕ್ವೆಲ್ ಸಾಂಗ್ಸ್ ಕೂಡಾ ಪ್ರೇಕ್ಷಕರನ್ನು ತಲುಪಿವೆ. ನಾಗಶೇಖರ್ ನಿರ್ದೇಶನದ ಮೊದಲ ಭಾಗದಲ್ಲಿ ಶ್ರೀನಗರ ಕಿಟ್ಟಿ ಜೊತೆಗೆ ಮೋಹಕತಾರೆ ರಮ್ಯಾ ಅಭಿನಯಿಸಿದ್ದರು. ಸಿನಿಮಾ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.
ಇತ್ತೀಚೆಗೆ ಚಿತ್ರದ ಬಗ್ಗೆ ಮಾತನಾಡಿದ್ದ ಚಂದ್ರಚೂಡ್, ಒಮ್ಮೆ ನನ್ನ ಗೆಳೆಯ, ನಿರ್ದೇಶಕ ಆರ್.ಚಂದ್ರು ಅವರ ಜತೆ ಶಿಡ್ಲಘಟ್ಟಕ್ಕೆ ಹೋಗಿದ್ದೆ. ಆಗ ರೇಶ್ಮೆ ಬೆಳೆಯುವ ರೈತರ ಕಷ್ಟವನ್ನರಿತೆ. ಅವರ ಪರಿಸ್ಥಿತಿಯನ್ನು ಕಣ್ಣಾರೆ ನೋಡಿದೆ. ಅವರು ಎಷ್ಟು ರೇಶ್ಮೆ ಬೆಳೆಯುತ್ತಾರೆ, ಅದು ಎಲ್ಲಿಗೆ ಹೋಗುತ್ತದೆ, ಜಾಗತೀಕರಣದ ಜಗತ್ತಿನಲ್ಲಿ ಬೆಳೆಗಾರರಿಗೆ ಅದರಿಂದ ಎಷ್ಟು ಪ್ರತಿಫಲ ಸಿಗುತ್ತಿದೆ, ಅವರಿಗೆ ಏಕೆ ಮಾರುಕಟ್ಟೆ ದೊರಕುತ್ತಿಲ್ಲ - ಇದನ್ನೆಲ್ಲಾ ನೋಡಿದಾಗ ಈ ಬಗ್ಗೆಯೇ ಒಂದು ಕಥೆ ಮಾಡಬಾರದೇಕೆ ಎಂದನಿಸಿತು. ಒಮ್ಮೆ ನಾಗಶೇಖರ್ ಸಿಕ್ಕಾಗ ಸಂಜು ವೆಡ್ಸ್ ಗೀತಾ 2 ಮಾಡುತ್ತಿದ್ದೇನೆ ಎಂದರು. ನಟ ಕಿಟ್ಟಿ, ನಿರ್ದೆಶಕ ನಾಗಶೇಖರ್, ನಿರ್ಮಾಪಕ ಕುಮಾರ್ ಎಲ್ಲರೂ ಸೇರಿ ಕಥೆ ಬಗ್ಗೆ ಚರ್ಚಿಸುತ್ತಿರುವಾಗ ಈ ಅಂಶವನ್ನು ಹೇಳಿದೆ. ಎಲ್ಲರಿಗೂ ಇಷ್ಟವಾಯ್ತು. ಕೊನೆ ಹಂತದಲ್ಲಿದ್ದ ಕಥೆಗೆ ಹೊಸ ರೂಪ ಸಿಕ್ಕಿತು. ರೇಶ್ಮೆ ಬೆಳೆಯುವ ರೈತರು, ಸ್ವಿಟ್ಜರ್ಲ್ಯಾಂಡ್ನ ರಾಣಿ ಮತ್ತು ಸೈನಿಕನ ಕಥೆ ಇವೆರಡನ್ನೂ ಸೇರಿಸಿ ಹೊಸದೊಂದು ಚಿತ್ರಕಥೆ ರೆಡಿಯಾಯಿತು.