ನಾಳೆ ತೆರೆಗಪ್ಪಳಿಸಲಿರುವ ಡಾಲಿ ಧನಂಜಯ್ ಅಭಿನಯದ 'ಕೋಟಿ' ಸಿನಿಮಾ ಪ್ರೀಮಿಯರ್ ಶೋ ಇತ್ತೀಚೆಗೆ ಓರಾಯನ್ ಮಾಲ್‌ನಲ್ಲಿ ನಡೆದಿತ್ತು. ಕನ್ನಡ ಚಿತ್ರರಂಗದ ಹಲವು ಗಣ್ಯರು ಆಗಮಿಸಿ ಸಿನಿಮಾ ವೀಕ್ಷಿಸಿದರು.
ಈ ಸಿನಿಮಾ ನಿರ್ದೇಶಿಸಿರುವ ಪರಮ್ ಅವರು ದಶಕಗಳ ಕಾಲ ಕಲರ್ಸ್ ಕನ್ನಡ ವಾಹಿನಿ ಮುನ್ನಡೆಸಿದವರು. ಕಿರುತೆರೆ ಮತ್ತು ಹಿರಿತೆರೆಯ ಎಲ್ಲೆಡೆ ಇವರಿಗೆ ಸ್ನೇಹಿತರಿದ್ದಾರೆ. ಇದೇ ಕಾರಣಕ್ಕೆ ತಾರೆಗಳಿಗಾಗಿ ಎರಡು ಪ್ರೀಮಿಯರ್ ಶೋ ಆಯೋಜಿಸಿದ್ದರು. ಸಾರ್ವಜನಿಕರಿಗೆ ಪೇಯ್ಡ್ ಪ್ರೀಮಿಯರ್ ಶೋ ಸೇರಿ ಮೂರು ಪರದೆಗಳು ಹೌಸ್‌ಫುಲ್ ಆಗಿದ್ದವು. ಸಾವಿರಕ್ಕಿಂತಲೂ ಹೆಚ್ಚು ಜನರು ಆಗಮಿಸಿ ಸಿನಿಮಾ ವೀಕ್ಷಿಸಿದರು.
ಸಿನಿಮಾದಲ್ಲಿ ಧನಂಜಯ್ ಎಂಟ್ರಿ ವೇಳೆ ಶಿಳ್ಳೆ, ಕೇಕೆ ಜೋರಾಗಿತ್ತು. ಒಂದು ದೃಶ್ಯಕ್ಕೆ ಇಡೀ ಚಿತ್ರಮಂದಿರವೇ ಹರ್ಷೋದ್ಘರಿಸಿದರೆ, ಕ್ಲೈಮ್ಯಾಕ್ಸ್ ಪ್ರೇಕ್ಷಕರನ್ನು ಸೀಟಿನಂಚಿನಲ್ಲಿ ಕೂರಿಸಿತ್ತು. ಸಿನಿಮಾ ಮುಗಿಯುತ್ತಿದ್ದಂತೆ ಮುಖ್ಯ ಪರದೆಯಲ್ಲಿ ಪ್ರೇಕ್ಷಕರೊಬ್ಬರು ಓಡಿ ಬಂದು ನಿರ್ದೇಶಕರನ್ನು ತಬ್ಬಿಕೊಂಡು ಖುಷಿ ವ್ಯಕ್ತಪಡಿಸಿದರು.
ಟಿ.ಎನ್.ಸೀತಾರಾಂ, ಜೋಗಿ, ಹೇಮಂತ್ ರಾವ್, ಕಿರಣ್ ರಾಜ್, ಆರ್.ಚಂದ್ರು, ಸತೀಶ್ ನೀನಾಸಂ, ನವೀನ್ ಶಂಕರ್, ಮಂಜು ಪಾವಗಡ, ಬಿಗ್ ಬಾಸ್ ವಿನ್ನರ್ ಕಾರ್ತಿಕ್, ದಿವ್ಯಾ ಉರುಡುಗ, ಅರವಿಂದ್ ಕೆ.ಪಿ., ಶೈನ್ ಶೆಟ್ಟಿ ಸೇರಿದಂತೆ ಸಾಕಷ್ಟು ಮಂದಿ ಸಿನಿಮಾ ವೀಕ್ಷಿಸಿದರು.
ಬುಕಿಂಗ್ಸ್ ಈಗಾಗಲೇ ಓಪನ್ ಆಗಿದೆ. ಇಂದು ಮೈಸೂರು ಮತ್ತು ಶಿವಮೊಗ್ಗದಲ್ಲಿ ಪ್ರೀಮಿಯರ್ ಶೋ ನಡೆಯಲಿದೆ. ಧನಂಜಯ್ ಮತ್ತು ಸಿನಿಮಾ ತಂಡ ಮೈಸೂರಿನ ಸಿನಿಪ್ರೇಮಿಗಳೊಂದಿಗೆ 'ಕೋಟಿ' ನೋಡಲಿದೆ. ನಾಳೆ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ನಂತರದ ದಿನಗಳಲ್ಲಿ ಅಮರಿಕ, ಇಂಗ್ಲೆಂಡ್, ಯುರೋಪ್ ಮತ್ತು ಗಲ್ಫ್ ದೇಶಗಳಲ್ಲೂ ಬಿಡುಗಡೆಯಾಗಲಿದೆ.