ಕರ್ನಾಟಕ

karnataka

ETV Bharat / entertainment

12 ವರ್ಷಗಳಲ್ಲಿ 80 ಸಿನಿಮಾ: ಸ್ಯಾಂಡಲ್​​ವುಡ್​​ ಉನ್ನತಿಯ ಕನಸು ಕಂಡಿದ್ದ ಶಂಕರ್​ ನಾಗ್​​ ಜನ್ಮದಿನ

ಅಭಿಮಾನಿಗಳ ಆಟೋರಾಜ ಶಂಕ್ರಣ್ಣ ಬದುಕಿದಿದ್ದರೆ ಇಂದು ಅಭಿಮಾನಿಗಳೊಂದಿಗೆ 70ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಅವರು ಸ್ಯಾಂಡಲ್​ವುಡ್​ ಉನ್ನತಮಟ್ಟಕ್ಕೆ ಬೆಳೆಸಬೇಕೆಂಬ ಕನಸು ಕಂಡಿದ್ದರು.

Sandalwood legend Shankar Nag
ನಟ ಶಂಕರ್ ನಾಗ್ (File Photo)

By ETV Bharat Entertainment Team

Published : Nov 9, 2024, 1:31 PM IST

ಶಂಕರ್ ನಾಗ್. ಈ ಹೆಸರಲ್ಲೇ ಒಂದು ಪಾಸಿಟಿವ್ ಎನರ್ಜಿ ಇದೆ. ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ. ನಮ್ಮನ್ನಗಲಿದ್ದರೂ ಅವರ ನೆನಪು ಅಭಿಮಾನಿಗಳೆದೆಯಲ್ಲಿ ಸದಾ ಜೀವಂತ. ಬಣ್ಣ ಹಚ್ಚಿದ್ದ ಮತ್ತು ನಿರ್ದೇಶಿಸಿದ್ದ ಸಿನಿಮಾಗಳು, ಕರಾಟೆ ಕಿಂಗ್​​ಗೆ ಇದ್ದ ದೂರದೃಷ್ಠಿ, ಕನ್ನಡ ಚಿತ್ರರಂಗವನ್ನು ಉನ್ನತ ಮಟ್ಟಕ್ಕೆ ಬೆಳಸುವ ಅವರ ಕನಸು ಸದಾ ಅಭಿಮಾನಿಗಳನ್ನು ಕಾಡುತ್ತದೆ. ಇಂದು ಬಣ್ಣದ ಲೋಕದಲ್ಲಿ ಮಿಂಚಿನ ಓಟಕ್ಕಿಳಿದ ಗೆದ್ದ ಆಟೋರಾಜನ ಜನ್ಮದಿನ. ಶಂಕ್ರಣ್ಣ ಬದುಕಿದಿದ್ದರೆ ಇಂದು ಅಭಿಮಾನಿಗಳೊಂದಿಗೆ 70ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು.

ಶಂಕರ್ ನಾಗ್ ಅವರ ಮೂಲ ಹೆಸರು ನಾಗರಕಟ್ಟೆ ಶಂಕರ್. 1954ರ ನವೆಂಬರ್ 9ರಂದು ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಗ್ರಾಮದಲ್ಲಿ ಜನಿಸಿದರು. ಬಾಲ್ಯದಲ್ಲೇ ಬಹಳ ಚುರುಕಾಗಿದ್ದರು. ಪೋಷಕರು ಪ್ರೀತಿಯಿಂದ ಮಗನನ್ನು ಭವಾನಿ ಶಂಕರ ಎಂದು ಕರೆಯುತ್ತಿದ್ದರು. ಅಣ್ಣ ಅನಂತ್​​ ನಾಗ್ ಅವರೊಂದಿಗೆ ನಾಟಕಗಳನ್ನು ನೋಡಲು ತೆರಳುತ್ತಿದ್ದ ಶಂಕರ್​​ ನಾಗ್, ಅಣ್ಣನ ಒತ್ತಾಯದ ಮೇರೆಗೆ ತಾವೂ ಕೂಡಾ ರಂಗಭೂಮಿ ಚಟುವಟಿಕೆಗಳಲ್ಲಿ ಭಾಗಿಯಾದರು. ಅಣ್ಣ ತಮ್ಮ ಇಬ್ಬರೂ ಬ್ಯಾಂಕ್​ ನಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ ರಂಗಭೂಮಿಯನ್ನು ಮಾತ್ರ ಬಿಟ್ಟಿರಲಿಲ್ಲ. ಇವರು 12 ವರ್ಷಗಳ ಅವಧಿಯಲ್ಲಿ, ಸುಮಾರು 80ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನಟ ಶಂಕರ್ ನಾಗ್ (File Photo)

ಶಂಕರ್ ನಾಗ್ ಸ್ನೇಹಿತರೊಂದಿಗೆ ವಿದೇಶಕ್ಕೆ ತೆರಳಿ ಏನಾದರೂ ಸಾಧನೆ ಮಾಡಬೇಕು ಅಂದುಕೊಂಡಿದ್ದರು. ಆದ್ರೆ ಕನ್ನಡ ಚಿತ್ರರಂಗ ಕೈ ಬೀಸಿ ಕರೆಯುತ್ತದೆ ಅಂದುಕೊಂಡಿರಲಿಲ್ಲ. ಹೌದು, ಕನ್ನಡದ ಖ್ಯಾತ ನಟ ಹಾಗೂ ನಿರ್ದೇಶಕ ಗಿರೀಶ್ ಕಾರ್ನಾಡ್​ ನಿರ್ದೇಶನದ 'ಒಂದಾನೊಂದು ಕಾಲದಲ್ಲಿ' ಚಿತ್ರದಲ್ಲಿ ಶಂಕರ್ ನಾಗ್ ಅವರಿಗೆ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಮೊದಲ ಚಿತ್ರದಲ್ಲೇ ಎಲ್ಲರ ಗಮನ ಸೆಳೆದ ಶಂಕ್ರಣ್ಣನಿಗೆ ಒಂದರ ಹಿಂದೊಂದರಂತೆ ಸಿನಿಮಾಗಳು ಹುಡುಕಿ ಬಂದವು. 'ಮಿಂಚಿನ ಓಟ' ಚಿತ್ರದ ಮೂಲಕ ನಿರ್ದೇಶನಕ್ಕೂ ಇಳಿದ ಅವರು ಅನೇಕ ಸಿನಿಮಾಗಳನ್ನು ನಿರ್ದೇಶಿಸಿದರು. ಜನ್ಮಜನ್ಮದ ಅನುಬಂಧ, ಗೀತಾ, ಮಿಂಚಿನ ಓಟ ಸಿನಿಮಾಗಳನ್ನು ನಿರ್ಮಾಣ ಕೂಡಾ ಮಾಡಿದ್ದರು.

ನಟ ಶಂಕರ್ ನಾಗ್ (File Photo)

ಆರ್​.ಕೆ ನಾರಾಯಣ್ ಅವರ 'ಮಾಲ್ಗುಡಿ ಡೇಸ್' ಕಾದಂಬರಿಯನ್ನು ಮೂಲ ಹೆಸರಿನಲ್ಲೇ ಧಾರಾವಾಹಿಯಾಗಿ ನಿರ್ದೇಶಿಸಿ ರಾಷ್ಟ್ರಮಟ್ಟದಲ್ಲೂ ಹೆಸರು ಸಂಪಾದಿಸಿದರು. 1987ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ಈ ಧಾರಾವಾಹಿ, ಹಿಂದಿ ಹಾಗೂ ಇಂಗ್ಲಿಷ್​​ನಲ್ಲಿ ಪ್ರಸಾರವಾಯ್ತು. ಕನ್ನಡಕ್ಕೂ ಡಬ್ ಆಗಿ ಕಿರುತೆರೆಯಲ್ಲಿಯೂ ಪ್ರಸಾರ ಆಗಿದೆ. ಕನ್ನಡ ಕಲಾವಿದರೇ ನಟಿಸಿದ್ದ ಈ ಧಾರಾವಾಹಿಯನ್ನು ಕರ್ನಾಟಕದ ಶಿವಮೊಗ್ಗ, ಆಗುಂಬೆ ಹಾಗೂ ಇನ್ನಿತರೆ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.

ಇದನ್ನೂ ಓದಿ:ಶಂಕರ್​ ನಾಗ್ 34ನೇ​​ ಪುಣ್ಯಸ್ಮರಣೆ: 12 ವರ್ಷಗಳಲ್ಲಿ 80 ಸಿನಿಮಾ; ಆಟೋರಾಜನ ಬಾಲ್ಯ, ವೈಯಕ್ತಿಕ, ವೃತ್ತಿಜೀವನದ ಮೆಲುಕು - Shankar Nag 34th Death Anniversary

ನಟ ಶಂಕರ್ ನಾಗ್ (File Photo)

ರಂಗಭೂಮಿ ಕಲಾವಿದೆ ಅರುಂಧತಿ ನಾಗ್ ಅವರನ್ನು ಪ್ರೀತಿಸಿ ಮದುವೆಯಾದ ಶಂಕರ್ ​ನಾಗ್, ಪತ್ನಿಯೊಂದಿಗೆ ಸೇರಿ 'ಸಂಕೇತ್' ಎಂಬ ಹವ್ಯಾಸಿ ರಂಗಭೂಮಿ ತಂಡವನ್ನು ಕಟ್ಟಿ ಅನೇಕ ನಾಟಕಗಳನ್ನು ಪ್ರದರ್ಶಿಸಿದರು. ಈ ದಂಪತಿಗೆ ಕಾವ್ಯ ಎಂಬ ಪುತ್ರಿ ಇದ್ದಾರೆ. ಶಂಕ್ರಣ್ಣನ ನಿಧನದ ನಂತರ ಅರುಂಧತಿ ನಾಗ್ 'ರಂಗಶಂಕರ' ಎಂಬ ರಂಗಮಂದಿರವನ್ನು ಸ್ಥಾಪಿಸಿದರು. 'ಆಟೋರಾಜ' ಚಿತ್ರದ ಮೂಲಕ ಶಂಕರ್​ ನಾಗ್​ ಆಟೋ ಚಾಲಕರ ಮೆಚ್ಚಿನ ನಟನಾದರು. ಇಂದಿಗೂ ಕೂಡಾ ಬಹುತೇಕ ಆಟೋಗಳಲ್ಲಿ ಶಂಕರ್ ​​ನಾಗ್ ಫೋಟೋಗಳನ್ನು ಕಾಣಬಹುದು. ಆಟೋ ಚಾಲಕರ ಸಂಘಕ್ಕೆ ಒಂದು ಬೆಲೆ, ಅವ್ರಿಗೆ ಆದ ಗೌರವ ಇದೆ ಅಂದ್ರೆ ಅದು ಶಂಕರ್ ನಾಗ್​​ ತಂದು ಕೊಟ್ಟ ಮನ್ನಣೆ ಎಂಬುದು ಹೆಚ್ಚಿನವರ ಅಭಿಪ್ರಾಯ.

ನಟ ಶಂಕರ್ ನಾಗ್ ಅಪರೂಪದ ಕ್ಷಣ (File Photo)

ಇದನ್ನೂ ಓದಿ:'ಒಂದಾನೊಂದು ಕಾಲದಲ್ಲಿ' ಮಿಂಚಿ ಮರೆಯಾದ ಶಂಕರ್ ನಾಗ್: ಕಾರು ಅಪಘಾತವಾಗಿದ್ದೇಗೆ? ಪ್ರತ್ಯಕ್ಷದರ್ಶಿಗಳು ಹೇಳಿದ್ದಿಷ್ಟು - Shankar Nag Car Accident

ಆಟೋರಾಜ ಅಭಿನಯಿಸಿದ ಕೊನೆಯ ಚಿತ್ರ 'ನಿಗೂಢ ರಹಸ್ಯ'. ಕನ್ನಡ ಚಿತ್ರರಂಗದ ಅಭಿವೃದ್ಧಿ ಬಗ್ಗೆ ದೊಡ್ಡ ಮಟ್ಟಿನ ಕನಸು ಕಂಡಿದ್ದ ಶಂಕರ್ ​ನಾಗ್ ಅದನ್ನು ಕಾರ್ಯರೂಪಕ್ಕೆ ತರುವಷ್ಟರಲ್ಲೇ ನಿಧನರಾದರು. 1990ರ ಸೆಪ್ಟೆಂಬರ್​​ 30ರಲ್ಲಿ ದಾವಣಗೆರೆ ಬಳಿ ಮ್ಮೆಲ್ಲರ ಪ್ರೀತಿಯ ಶಂಕ್ರಣ್ಣ ​​​​​​ಚಲಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಕೊನೆಯುಸಿರೆಳೆದರು. ಅವರಿಂದು ನಮ್ಮೊಂದಿಗೆ ಇಲ್ಲದಿದ್ದರೂ ಹೆಚ್ಚಿನ ಸಂಖ್ಯೆಯ ಕಲಾಭಿಮಾನಿಗಳು ಹಾಗೂ ಆಟೋ ಚಾಲಕರ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ABOUT THE AUTHOR

...view details