ಕರ್ನಾಟಕ

karnataka

ETV Bharat / entertainment

5 ವರ್ಷದ ಬಳಿಕ 'ಕ್ರೀಂ' ಹಚ್ಚಿದ 'ಕಿರಿಕ್ ಪಾರ್ಟಿ' ಸಂಯುಕ್ತಾ ಹೆಗ್ಡೆ - Kannada film

ಕಿರಿಕ್ ಪಾರ್ಟಿ ಸಿನಿಮಾದಿಂದ ಕನ್ನಡ ಚಿತ್ರರಂಗವಲ್ಲದೇ ಪರಭಾಷೆಗಳಲ್ಲೂ ಸದ್ದು ಮಾಡುತ್ತಿರುವ ಸಂಯುಕ್ತಾ ಹೆಗ್ಡೆ ನಟನೆಯ 'ಕ್ರೀಂ' ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ.

'ಕ್ರೀಂ' ಚಿತ್ರ ತಂಡ
'ಕ್ರೀಂ' ಚಿತ್ರ ತಂಡ

By ETV Bharat Karnataka Team

Published : Jan 31, 2024, 7:25 AM IST

Updated : Jan 31, 2024, 7:47 AM IST

ಭಾಗಶಃ ಚಿತ್ರೀಕರಣ ಮುಗಿಸಿರುವ ಸಂಯುಕ್ತಾ ಹೆಗ್ಡೆ ಅಭಿನಯದ 'ಕ್ರೀಂ' ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ವಿಷುಯಲ್ ಟ್ರೇಲರ್ ಇತ್ತೀಚೆಗೆ A2 music ಮೂಲಕ ಬಿಡುಗಡೆಯಾಯಿತು. ಪತ್ರಕರ್ತ ಅಗ್ನಿ ಶ್ರೀಧರ್ ವಿಷುಯಲ್ ಟ್ರೇಲರ್ ಬಿಡುಗಡೆಗೊಳಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

'ಕ್ರೀಂ' ಚಿತ್ರ ತಂಡ

ಅಗ್ನಿ ಶ್ರೀಧರ್ ಮಾತನಾಡಿ, ಎಲ್ಲಾ ಊರು, ರಾಜ್ಯ, ಭಾಷೆಗಳಲ್ಲಿ ಕಾಣದ ಗರ್ಭ ಅಂತ ಇರುತ್ತದೆ. ಅಲ್ಲಿ ಏನೆಲ್ಲಾ ನಡೆಯುತ್ತದೆ. ಬೆಂಗಳೂರಿನಲ್ಲೇ ನನಗೆ ಗೊತ್ತಿರುವ ಸಂಗತಿಯಿಟ್ಟುಕೊಂಡು ಹತ್ತಾರು ವರ್ಷಗಳಿಂದ ಯೋಚನೆ ಮಾಡುತ್ತಿದ್ದೆ. ಆದರೆ ಸಿನಿಮಾ ಮಾಡಲು ಆಗಿರಲಿಲ್ಲ. ನಿರ್ಮಾಪಕ ದೇವೇಂದ್ರ ಸಿನಿಮಾ ಮಾಡಲೇಬೇಕು ಎಂದು ನನ್ನನ್ನು ಒತ್ತಾಯಿಸಿದಾಗ ಕಥೆ ಹೇಳಿದೆ. ಈ ಚಿತ್ರ ಮಾಡುವುದಕ್ಕೆ ನಿಜವಾಗಿಯೂ ತುಂಬಾ ಧೈರ್ಯ ಬೇಕು.‌ ಆ ಧೈರ್ಯವನ್ನು ದೇವೇಂದ್ರ ಮಾಡಿದ್ದಾರೆ. ಭಾರತದಲ್ಲಿ ಪ್ರತಿವರ್ಷ ಎರಡೂವರೆ ಸಾವಿರ ಮಹಿಳೆಯರು ಒಂದಲ್ಲೊಂದು ಕಾರಣದಿಂದ ಬಲಿಯಾಗುತ್ತಿದ್ದಾರೆ. ಅದಕ್ಕೆ ಕಾರಣವೇನು ಎಂಬುದನ್ನು ತಿಳಿಸುವ ಕಥೆ ಚಿತ್ರದಲ್ಲಿದೆ. ಸಂಯುಕ್ತಾ ಹೆಗ್ಡೆ ಅಚ್ಚುಕಟ್ಟಾದ ಪಾತ್ರ ನಿರ್ವಹಿಸಿದ್ದಾರೆ. ಬಹಳ ಶ್ರಮ ಪಟ್ಟಿದ್ದಾರೆ. 'ಕ್ರೀಂ' ಮೂಲಕ ಅವರು ಇನ್ನೂ ಎತ್ತರಕ್ಕೆ ಹೋಗುತ್ತಾರೆ ಎಂಬ ವಿಶ್ವಾಸವಿದೆ. ನಿರ್ದೇಶಕ ಅಭಿಷೇಕ್ ಬಸಂತ್ ನನ್ನ ತಮ್ಮನ ಮಗ.‌ ಆತ ಬಹಳ ಬುದ್ಧಿವಂತ. ತುಂಬಾ ಚೆನ್ನಾಗಿ ಚಿತ್ರ ಮಾಡಿದ್ದಾನೆ. ಶಿವು ಕಲಾ ನಿರ್ದೇಶನ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು.

ನಿರ್ದೇಶಕ ಅಭಿಷೇಕ್ ಬಸಂತ್ ಮಾತನಾಡಿ, ಚಿತ್ರತಂಡದ ಸಹಕಾರದಿಂದ ಇಪ್ಪತ್ತೆಂಟು ದಿನಗಳಲ್ಲಿ ಚಿತ್ರೀಕರಣ ಮುಕ್ತಾಯವಾಗಿದೆ.‌ ವಿಷುಯಲ್ ಟ್ರೇಲರ್ ಅದ್ಧೂರಿಯಾಗಿ ಬಿಡುಗಡೆಗೊಂಡಿದೆ. ಸದ್ಯದಲ್ಲೇ 'ಕ್ರೀಂ' ಪ್ರೇಕ್ಷಕರ ಮುಂದೆ ಬರಲಿದೆ ಎಂದು ಹೇಳಿದರು.

ಸಂಯುಕ್ತಾ ಹೆಗ್ಡೆ ಮಾತನಾಡಿ, ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಐದು ವರ್ಷಗಳ ನಂತರ ನಾನು ನಟಿಸಿರುವ ಕನ್ನಡ ಸಿನಿಮಾ ಇದು. ಆ್ಯಕ್ಷನ್ ಕೂಡ ಇದೆ. ನನ್ನ ಕಾಲು ಕೂಡ ಮುರಿದಿತ್ತು. ಒಟ್ಟಿನಲ್ಲಿ ಎಲ್ಲರ ಶ್ರಮದಿಂದ 'ಕ್ರೀಂ' ಚೆನ್ನಾಗಿ ಬಂದಿದೆ. ಛಾಯಾಗ್ರಾಹಕ ಸುನೋಜ್ ವೇಲಾಯುಧನ್ ಅವರ ಛಾಯಾಗ್ರಹಣ ಸುಂದರವಾಗಿದೆ. ಸಹಕಾರ ನೀಡಿದ ನಿರ್ದೇಶಕ, ನಿರ್ಮಾಪಕರಿಗೆ ಹಾಗೂ ವಿಶೇಷವಾಗಿ ಅಗ್ನಿ ಶ್ರೀಧರ್ ಸರ್​ಗೆ ನನ್ನ ಕೃತಜ್ಞತೆ ಎಂದು ತಿಳಿಸಿದರು.

'ಕ್ರೀಂ' ಚಿತ್ರ ತಂಡ

ನಿರ್ಮಾಪಕ ಡಿ.ಕೆ.ದೇವೇಂದ್ರ ಮಾತನಾಡಿ, ನಾನು ಮೊದಲು ಉತ್ತಮ ಕಥೆ ನೀಡಿರುವ ಅಗ್ನಿ ಶ್ರೀಧರ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಇಡೀ ತಂಡ ಚಿತ್ರ ಚೆನ್ನಾಗಿ ಮೂಡಿಬರಲು ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವುದಾಗಿ ತಿಳಿಸಿದರು.

ಚಿತ್ರಕ್ಕೆ ರೋಹಿತ್ ಸಂಗೀತವಿದ್ದು, ಶಿವಕುಮಾರ್ ಕಲಾ ನಿರ್ದೇಶನವಿದೆ. ಅಭಿಷೇಕ್ ಬಸಂತ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಬರೆದಿದ್ದಾರೆ.

'ಕ್ರೀಂ' ಚಿತ್ರ ತಂಡ

ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ರೋಷನ್‌ ಅಗ್ನಿ ಶ್ರೀಧರ್, ಬಚ್ಚನ್, ಇಫ್ರಾನ್, ನಿರ್ಮಾಪಕರಾದ ಕೆ.ಮಂಜು, ಸಂಜಯ್ ಗೌಡ, ನವರಸನ್, ಶ್ರೇಯಸ್ ಮೀಡಿಯಾ ಶ್ರೀನಿವಾಸ್ ಹಾಗೂ ನಿರ್ದೇಶಕ ಜಡೇಶ್ ಕೆ.ಹಂಪಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಇದನ್ನೂ ಓದಿ:ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾದ ನಿರ್ಮಾಪಕ‌ ಹೆಚ್ಎಂಕೆ ಮೂರ್ತಿ ಮೊಮ್ಮಗ ಯಶಸ್ವ

Last Updated : Jan 31, 2024, 7:47 AM IST

ABOUT THE AUTHOR

...view details