ಮಂಗಳವಾರ ಸಂಜೆ ಮುಂಬೈನಲ್ಲಿ ''ಪ್ರೈಮ್ ವಿಡಿಯೋ'' ಈವೆಂಟ್ ಒಂದನ್ನು ಆಯೋಜಿಸಿತ್ತು. 69 ಹೊಸ ಪ್ರೊಜೆಕ್ಟ್ ಅನೌನ್ಸ್ಮೆಂಟ್ ಜೊತೆಗೆ ಹಿಂದಿನ ಯಶಸ್ವಿ ಸೀರಿಸ್ಗಳ ಸೆಲೆಬ್ರೆಶನ್ ಕೂಡ ನಡೆಯಿತು. ಈ ಕಾರ್ಯಕ್ರಮಕ್ಕೆ ಬಹುಭಾಷಾ ಸಿನಿತಾರೆಯರು ಆಗಮಿಸಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋ-ವಿಡಿಯೋಗಳು ವೈರಲ್ ಆಗುತ್ತಿವೆ. ಇಲ್ಲಿ ನೆಟ್ಟಿಗರ ಗಮನ ಸೆಳೆದ ವಿಚಾರವೆಂದರೆ, ಒಂದೇ ಸಮಾರಂಭದಲ್ಲಿ ಸಮಂತಾ ರುತ್ ಪ್ರಭು, ನಾಗ ಚೈತನ್ಯ, ಶೋಭಿತಾ ಧೂಳಿಪಾಲ ಅವರ ಉಪಸ್ಥಿತಿ.
ಬಾಲಿವುಡ್ ಸ್ಟಾರ್ ವರುಣ್ ಧವನ್ ಮತ್ತು ಸೌತ್ ಸ್ಟಾರ್ ನಟಿ ಸಮಂತಾ ರುತ್ ಪ್ರಭು ನಟನೆಯ 'ಸಿಟಾಡೆಲ್: ಹನಿ ಬನಿ'ಯಂತಹ ಕಾರ್ಯಕ್ರಮಗಳನ್ನು ಒಳಗೊಂಡಂತೆ 69 ಹೊಸ ಟೈಟಲ್ಗಳನ್ನು ಪ್ರೈಮ್ ವಿಡಿಯೋ ಮಂಗಳವಾರದಂದು ಅನಾವರಣಗೊಳಿಸಿದೆ. ಅಲ್ಲದೇ, ಸೌತ್ ಸೂಪರ್ ಸ್ಟಾರ್ ನಾಗಚೈತನ್ಯರನ್ನು ಒಳಗೊಂಡ 'ಧೂತ' ಸರಣಿಯ ಯಶಸ್ಸನ್ನೂ ಇದೇ ವೇದಿಕೆಯಲ್ಲಿ ಆಚರಿಸಲಾಯಿತು. ಕಳೆದ ಮೂರು ವರ್ಷಗಳಲ್ಲಿ ನಾಗಚೈತನ್ಯ ಮತ್ತು ಸಮಂತಾ (ವಿಚ್ಛೇದಿತ ದಂಪತಿ) ಒಟ್ಟಿಗೆ ಕಾಣಿಸಿಕೊಂಡಿದ್ದು ಇದೇ ಮೊದಲು. ನಾಗ ಚೈತನ್ಯ ಜೊತೆ ಡೇಟಿಂಗ್ನಲ್ಲಿದ್ದಾರೆ ಎಂಬ ವದಂತಿಗೊಳಗಾಗಿರುವ ನಟಿ ಶೋಭಿತಾ ಧೂಳಿಪಾಲ ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾರಣ ನೆಟ್ಟಿಗರು ಸಾಕಷ್ಟು ಕುತೂಹಲ ವ್ಯಕ್ತಪಡಿಸಿದ್ದಾರೆ. ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳದಿದ್ದರೂ, ಈ ಇಬ್ಬರನ್ನು ಒಂದೇ ಸಮಾರಂಭದಲ್ಲಿ ನೋಡಿದ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
''ಪ್ರೈಮ್ ವಿಡಿಯೋ'' ಈವೆಂಟ್ನಲ್ಲಿ ಪ್ರಿಯಾಂಕಾ ಚೋಪ್ರಾ, ಸೂರ್ಯ, ಶಾಹಿದ್ ಕಪೂರ್, ಬಾಬಿ ಡಿಯೋಲ್, ತಮನ್ನಾ ಭಾಟಿಯಾ ಸೇರಿದಂತೆ ಅನೇಕ ಖ್ಯಾತನಾಮರು ಭಾಗವಹಿಸಿದ್ದರು. ಈವೆಂಟ್‌ನ ಫೋಟೋ-ವಿಡಿಯೋಗಳನ್ನು ಆನ್‌ಲೈನ್‌ನಲ್ಲಿ ಕಂಡ ನೆಟ್ಟಿಗರು, ಸಮಂತಾ-ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲರನ್ನು ಒಟ್ಟಿಗೆ ನೋಡಲು ಕಾದು ಕುಳಿತಿದ್ದರು. ಆದ್ರೆ ಅಂತಹ ಯಾವುದೇ ಫೋಟೋಗಳು ಹೊರಬಿದ್ದಿಲ್ಲ.