ಹೈದರಾಬಾದ್: ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಇಂದು ತಮ್ಮ 45ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆ ಪ್ರಭಾಸ್ ಅಭಿನಯದ ಮುಂಬರುವ ಚಿತ್ರ ದಿ ರಾಜಾಸಾಬ್ ಚಿತ್ರತಂಡ ಇಂದು ಮೋಸ್ಟರ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಬರ್ತ್ಡೇ ಗಿಫ್ಟ್ ನೀಡಿದ್ದಾರೆ. ವಿಭಿನ್ನವಾಗಿರುವ ಪೋಸ್ಟರ್ನಲ್ಲಿ ನಟ ಪ್ರಭಾಸ್ ಅವರು ಹಿಂದೆಂದೂ ಕಾಣಿಸದ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೋಷನ್ ಪೋಸ್ಟರ್ ಧೂಳೆಬ್ಬಿಸಿದೆ. ಕೆಲವೇ ಗಂಟೆಗಳಲ್ಲಿ ಮಿಲಿಯನ್ಗಟ್ಟಲೇ ವೀಕ್ಷಣೆಯನ್ನು ಪಡೆದಿದ್ದು, ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
45 ವರ್ಷದ ನಟ ರಾಜನಂತೆ ಸಿಂಹಾಸನದಲ್ಲಿ ಕುಳಿತು ಸಿಗಾರ್ ಸೇದುತ್ತಿರುವ ಹಾರರ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾರರ್ ಬೇಸ್ಡ್ ಹಿನ್ನೆಲೆ ಸಂಗೀತ ಆಕರ್ಷಕವಾಗಿದ್ದು, ಈ ಮೂಲಕ ಚಿತ್ರದ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳಲಾಗಿದೆ. ಬರ್ತ್ಡೇ ಹಿಂದಿನ ದಿನ ಬಿಡುಗಡೆಯಾದ ಪೋಸ್ಟರ್ನಲ್ಲಿ ಪ್ರಭಾಸ್ ಪ್ಲೈಡ್ ಶರ್ಟ್, ಕನ್ನಡಕ ಧರಿಸಿ, ಫ್ಲವರ್ ಬೊಕೆ ಹಿಡಿದು ಲವರ್ ಬಾಯ್ ಲುಕ್ನಲ್ಲಿ ಕಾಣಿಸಿದ್ದರು. ಆದರೆ ಇಂದು ರಿಲೀಸ್ ಆದ ಮೋಷನ್ ಪೋಸ್ಟರ್ನಲ್ಲಿ ಸಂಪೂರ್ಣ ವಿಭಿನ್ನ ಲುಕ್ನಲ್ಲಿದ್ದಾರೆ.
ನಿರ್ದೇಶಕ ಮಾರುತಿ ಅವರು ಆ್ಯಕ್ಷನ್ ಕಟ್ ಹೇಳುತ್ತಿರುವ ಹಾರರ್ ಕಾಮಿಡಿ ಸಿನಿಮಾ ದಿ ರಾಜಾಸಾಬ್. ಸದ್ದಿಲ್ಲದೆ ಶೂಟಿಂಗ್ ಆರಂಭಿಸಿದ್ದ ಚಿತ್ರತಂಡ, ಹಲವು ಶೆಡ್ಯೂಲ್ಗಳ ಬಳಿಕ ಅಧಿಕೃತವಾಗಿ ಸಿನಿಮಾ ಘೋಷಣೆ ಮಾಡಿತ್ತು. ಉಳಿದ ಭಾಗದ ಚಿತ್ರೀಕರಣವನ್ನು ಆದಷ್ಟು ಶೀಘ್ರದಲ್ಲಿ ಮುಗಿಸಲು ಚಿತ್ರತಂಡ ಪ್ಲಾನ್ ಮಾಡಿದೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟರ್ ಹಂಚಿಕೊಂಡಿರುವ ಚಿತ್ರತಂಡ "ರಾಯಲ್ ಬೈ ಬ್ಲಡ್.. ರೆಬಲ್ ಬೈ ಚಾಯ್ಸ್" ಎಂದು ಕ್ಯಾಪ್ಷನ್ ಕೊಟ್ಟಿದೆ. ಪೋಸ್ಟರ್ನಲ್ಲಿ ಕೊನೆಗೆ "ಹಾರರ್ ಈಸ್ ದ ನ್ಯೂ ಹ್ಯೂಮರ್" ಎಂದೂ ಹೇಳಲಾಗಿದೆ.