ಹೈದರಾಬಾದ್: ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಇತ್ತೀಚೆಗೆ ಬಾಲಿವುಡ್ ಬಗ್ಗೆ ನೀಡಿದ್ದ ಹೇಳಿಕೆ ವ್ಯಾಪಕ ಚರ್ಚೆಗೆ ವೇದಿಕೆ ಮಾಡಿಕೊಟ್ಟಿತ್ತು. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ / ಜಾಗತಿಕ ಮಟ್ಟದಲ್ಲಿ ಭಾರತವನ್ನು ಬಾಲಿವುಡ್ ಹೇಗೆ ಚಿತ್ರಿಸುತ್ತಿದೆ ಎಂಬುದರ ಬಗ್ಗೆ ನೀಡಿದ್ದ ಹೇಳಿಕೆಗಳು ವಿವಾದದ ಕೇಂದ್ರ ಬಿಂದುವಾಗಿದ್ದವು. ಸಂದರ್ಶನವೊಂದರಲ್ಲಿ ಅವರು ನೀಡಿದ್ದ ಕಾಮೆಂಟ್‌ಗಳು ಬಹುತೇಕರ ಹುಬ್ಬೇರಿಸಿತ್ತು. ಅದರಲ್ಲೂ ಬಾಲಿವುಡ್ ಬೆಂಬಲಿಗರಿಂದ ಟೀಕೆಗಳನ್ನು ಸ್ವೀಕರಿಸಿತ್ತು.
ಈ ಹಿಂದೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ರಿಷಬ್ ಶೆಟ್ಟಿ, "ಭಾರತೀಯ ಚಲನಚಿತ್ರಗಳು, ವಿಶೇಷವಾಗಿ ಬಾಲಿವುಡ್, ಭಾರತವನ್ನು ಕೆಟ್ಟದಾಗಿ ತೋರಿಸಿವೆ. ಈ ಕಲಾತ್ಮಕ ಚಲನಚಿತ್ರಗಳನ್ನು ಜಾಗತಿಕ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುತ್ತದೆ ಮತ್ತು ರೆಡ್ ಕಾರ್ಪೆಟ್ ಮಹತ್ವ ನೀಡಲಾಗುತ್ತದೆ. ನನ್ನ ರಾಷ್ಟ್ರ, ನನ್ನ ರಾಜ್ಯ, ನನ್ನ ಭಾಷೆ - ನನ್ನ ಹೆಮ್ಮೆ. ಜಾಗತಿಕವಾಗಿ ಇವನ್ನು ಪಾಸಿಟಿವ್ ಆಗಿ ಏಕೆ ತೋರಿಸಬಾರದು? ನಾನದನ್ನು ಮಾಡಲು ಪ್ರಯತ್ನಿಸುತ್ತೇನೆ" ಎಂದು ಹೇಳಿದ್ದರು. ಡಿವೈನ್ ಸ್ಟಾರ್ನ ಈ ಹೇಳಿಕೆ ವ್ಯಾಪಕವಾಗಿ ವೈರಲ್ ಆಗಿ, ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತ್ತು.
ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆ, ರಿಷಬ್ ಶೆಟ್ಟಿ ಐಫಾ (IIFA Utsavam 2024) ಈವೆಂಟ್ನಲ್ಲಿ ಈ ಬಗ್ಗೆ ಮಾತನಾಡಿದರು. ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಹೇಳಿದರು. "ಮೇ ಕ್ಯಾ ಬೋಲಾ ತಾ, ವೋ ಥೋಡಾ ಇದರ್ ಉದರ್ ಹೋ ಗಯಾ" ಎಂದು ಸ್ಪಷ್ಟಪಡಿಸಿದರು. ಸೂಕ್ತ ಸ್ಥಳದಲ್ಲಿ ಸ್ಪಷ್ಟೀಕರಣ ಅಥವಾ ವಿವರಣೆ ಒದಗಿಸುವುದಾಗಿ ಭರವಸೆ ನೀಡಿದರು.