ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ನಟ ದರ್ಶನ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಲಾಗಿದೆ. ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು 14 ದಿನಗಳ ಕಾಲ ವಿಸ್ತರಿಸಿ 24ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ ಆದೇಶ ಹೊರಡಿಸಿದ್ದಾರೆ.
ದರ್ಶನ್ ಮಾತ್ರವಲ್ಲದೇ ಇತರೆ ಆರೋಪಿಗಳಿಗೂ ಸಹ ನ್ಯಾಯಾಂಗ ಬಂಧನದ ಅವಧಿಯನ್ನು 14 ದಿನಗಳ ಕಾಲ ವಿಸ್ತರಿಸಿ ಆದೇಶಿಸಲಾಗಿದೆ. ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಇಂದು ಅಂತ್ಯವಾದ ಹಿನ್ನೆಲೆ, ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. 14 ದಿನಗಳ ಕಾಲ ನ್ಯಾಯಾಂಗ ಬಂಧನ ಮುಂದುವರೆದಿರುವುದರಿಂದ ಆಗಸ್ಟ್ 1ರ ವರೆಗೆ ಎಲ್ಲಾ ಆರೋಪಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ ಇರಬೇಕಿದೆ.
ಜಾಮೀನು ನೀಡದಂತೆ ಪೊಲೀಸರು ನೀಡಿರುವ ಕಾರಣಗಳೇನು? ಆರೋಪಿಗಳು ಅಪಹರಣ, ಹತ್ಯೆ, ಒಳಸಂಚು ಮತ್ತು ಸಾಕ್ಷ್ಯನಾಶದಂತಹ ಗಂಭೀರ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವುದು ಈವರೆಗೆ ಸಂಗ್ರಹಿಸಿರುವ ಪ್ರತ್ಯಕ್ಷ ಸಾಕ್ಷಿದಾರರರ ಹೇಳಿಕೆ, ತಾಂತ್ರಿಕ ಮತ್ತು ಇತರೆ ಸಾಕ್ಷ್ಯಾಧಾರಗಳಲ್ಲಿ ದೃಢಪಟ್ಟಿದೆ. ಪ್ರಕರಣದಲ್ಲಿ ಈವರೆಗೆ 83 ಲಕ್ಷ ರೂ.ಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಕೆಲ ವ್ಯಕ್ತಿಗಳನ್ನು ವಿಚಾರಣೆ ಮಾಡಿ ಮಾಹಿತಿ ಸಂಗ್ರಹಿಸಬೇಕಾಗಿದೆ. ಪ್ರಕರಣದ ತನಿಖಾ ಅವಧಿಯಲ್ಲಿ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ವಾಹನಗಳ ಪೈಕಿ ಕೆಲ ವಾಹನಗಳು ಬೇರೆಯವರ ಹೆಸರಿನಲ್ಲಿರುವುದು ತಿಳಿದುಬಂದಿದ್ದು, ಅವುಗಳ ಮಾಲೀಕರನ್ನು ಪತ್ತೆ ಮಾಡಿ ಹೇಳಿಕೆ ದಾಖಲಿಸಿಕೊಳ್ಳಬೇಕಿದೆ.
ಇದನ್ನೂ ಓದಿ:ಮನೆಯೂಟ ಕೇಳಿದ್ದ ದರ್ಶನ್: ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದ ಹೈಕೋರ್ಟ್ - Darshan Application Hearing