ಮಂಗಳೂರು(ದಕ್ಷಿಣ ಕನ್ನಡ): ಕಿರುತೆರೆಯಲ್ಲಿ ಖ್ಯಾತಿ ಗಳಿಸಿದ್ದ 'ಬ್ರಹ್ಮಗಂಟು' ಖ್ಯಾತಿಯ ಗೀತಾ ಭಾರತಿ ಭಟ್ ನಾಯಕಿಯಾಗಿ ನಟಿಸಿರುವ 'ರವಿಕೆ ಪ್ರಸಂಗ' ಸಿನಿಮಾ ಇದೇ ಫೆ. 16ಕ್ಕೆ ಬಿಡುಗಡೆಯಾಗಲಿದೆ. ದೃಷ್ಟಿ ಮೀಡಿಯಾ ಆ್ಯಂಡ್ ಪ್ರೊಡಕ್ಷನ್ ಮೂಲಕ ಹೊರಬರುತ್ತಿರುವ ಈ ಸಿನಿಮಾದಲ್ಲಿ ನಾಯಕ ನಟ ಇಲ್ಲ. ಚಿತ್ರದಲ್ಲಿರುವ ಕಥೆ ಮತ್ತು ರವಿಕೆಯೇ ಹೀರೋ ಎಂದು ಚಿತ್ರತಂಡ ತಿಳಿಸಿದೆ. ರವಿಕೆ ಕಾನ್ಸೆಪ್ಟ್ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ.
ಈ ಚಿತ್ರದ ಕಥೆ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಹಳ್ಳಿಯಲ್ಲಿ ನಡೆಯುತ್ತದೆ. ಈ ಹಳ್ಳಿಯಲ್ಲಿ ಚಿತ್ರದ ನಾಯಕಿ 'ಸಾನ್ವಿ' ತಮ್ಮ ಚಿಕ್ಕ ಕುಟುಂಬದ ಜೊತೆ ಇರುತ್ತಾರೆ. ನಾಯಕ ನಟಿ 28ರ ಹರೆಯದ ಯುವತಿಯಾಗಿದ್ದು, ಈಗಾಗಲೇ ಅವಳಿಗೆ ಸಾಕಷ್ಟು ಮದುವೆ ಸಂಬಂಧಗಳು ಬಂದಿದ್ದರೂ ಯಾವುದೇ ಸಂಬಂಧಗಳು ಅವಳಿಗೆ ಸರಿಯಾಗಿರುವುದಿಲ್ಲ. ಸಾನ್ವಿ ಮದುವೆಯಾಗಲು ಒಬ್ಬ ಹ್ಯಾಂಡ್ಸಮ್ ಯುವಕನನ್ನು ಹುಡುಕುತ್ತಿರುತ್ತಾಳೆ. ಮನೆಯವರು ಕೂಡ ಬೇಗ ಮದುವೆ ಮಾಡಬೇಕು ಎಂಬ ಯೋಚನೆಯಲ್ಲಿರುತ್ತಾರೆ. ಎಷ್ಟೋ ಸಂಬಂಧಗಳಿಂದ ತಿರಸ್ಕರಿಸಲ್ಪಟ್ಟ ಸಾನ್ವಿಗೆ ಈ ಬಾರಿ ಒಂದು ಫಾರಿನ್ ಪ್ರಪೋಸಲ್ ಬರುತ್ತದೆ. ಆ ವೇಳೆ ರವಿಕೆ ಹೊಲಿಯಲು ಕೊಡುವಲ್ಲಿಂದ ಸಿನಿಮಾ ಆರಂಭಗೊಂಡು ಕೋರ್ಟ್ ಮೆಟ್ಟಿಲು ಹತ್ತುತ್ತದೆ. ಈ ರೀತಿಯ ಕಥೆಯೊಂದಿಗೆ ಸಿನಿಮಾ ನಿರ್ಮಾಣವಾಗಿದೆ.
ರವಿಕೆ ಪ್ರಸಂಗ ಸಿನಿಮಾದ ನಿರ್ದೇಶಕ ಸಂತೋಷ್ ಕೊಡಂಕೇರಿ ಮಾತನಾಡಿ, ಸಿನಿಮಾ ಕಥೆಯ ಮೂಲಕ ಕೇವಲ ಮನರಂಜನೆ ಹಾಗೂ ಸಂದೇಶ ನೀಡಿದರೆ ಸಾಲದು, ನೋಡಿದವರಿಗೆ ಆ ಚಿತ್ರ ತಮ್ಮದೇ, ತಮ್ಮ ಬದುಕಿನ ಭಾಗ ಎನ್ನುವ ಭಾವನೆ ಮೂಡಬೇಕು. ಸಾಮಾನ್ಯವಾಗಿ ರವಿಕೆ ಅಂದ ತಕ್ಷಣ ಅದರ ಬಗ್ಗೆ ಗಂಭೀರ ಚಿಂತನೆಗಿಂತ ಹತ್ತು ಹಲವು ಹಾಸ್ಯಾಸ್ಪದವಾದ ಭಾವನೆ ಬಹುತೇಕರಲ್ಲಿ ಸಹಜವಾಗಿ ಮೂಡುತ್ತದೆ. ಆದರೆ ಆ ರವಿಕೆಯಿಂದಲೇ, ಮನಸ್ಸಿನ ಭಾವನೆಯನ್ನು ಅನಾವರಣಗೊಳಿಸಿ, ಸಮಾಜದಲ್ಲಿ ಅದೆಷ್ಟೋ ಇಂತಹ ಸಂದಿಗ್ಧ ಸ್ಥಿತಿಯಲ್ಲಿರುವ ಹಾಗೂ ಇಂತಹ ಸ್ಥಿತಿಯನ್ನು ಅನುಭವಿಸಿರುವ ಮಹಿಳೆಯರ ಭಾವನೆಗೆ ಈ ಸಿನಿಮಾ ಮೂಲಕ ಬಣ್ಣ ತುಂಬಬೇಕು ಎನ್ನುವ ಹಂಬಲದಿಂದ ರವಿಕೆ ಪ್ರಸಂಗ ಸಿನಿಮಾ ಮಾಡಲಾಗಿದೆ. ಜನರು ಖಂಡಿತಾ ಸಿನಿಮಾ ಮೆಚ್ಚುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.