'ನ್ಯಾಶನಲ್ ಕ್ರಶ್' ಖ್ಯಾತಿಯ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರತಂಗದಿಂದ ವೃತ್ತಿಜೀವನ ಆರಂಭಿಸಿ ಸದ್ಯ ಬಹುಭಾಷೆಗಳಲ್ಲಿ ಮಿಂಚುತ್ತಿರುವ ತಾರೆ. ಇತ್ತೀಚೆಗಷ್ಟೇ ತೆರೆಕಂಡ 'ಅನಿಮಲ್' ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, ನಟಿಯ ಜನಪ್ರಿಯತೆ ಹೆಚ್ಚಿಸಿದೆ. ಮುಂದಿನ ಬಹುನಿರೀಕ್ಷಿತ ಸಿನಿಮಾ ಪುಷ್ಪಾ 2ನಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ ನಟಿಯ ಲೇಟೆಸ್ಟ್ ಸೋಷಿಯಲ್ ಮೀಡಿಯಾ ಪೋಸ್ಟ್ ಅಭಿಮಾನಿಗಳಿಗೆ ಶಾಕ್ ನೀಡಿದೆ. ಸಂಭವನೀಯ ಅಪಾಯದಿಂದ ಸ್ವಲ್ಪದರಲ್ಲೇ ಪಾರಾದೆ ಎಂದು ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿನಲ್ಲಿ ಬರೆದುಕೊಂಡಿದ್ದು, ಈ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಿರಂತರ ಶೂಟಿಂಗ್ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ಮುಂಬೈಗೆ ತೆರಳಿದ್ದರು. ತಮ್ಮ ಚಿತ್ರೀಕರಣ ಪೂರ್ಣಗೊಳಿಸಿ, ಹೈದರಾಬಾದ್ಗೆ ವಾಪಸ್ಸಾಗಲು ಫ್ಲೈಟ್ ಹತ್ತಿದ್ದಾರೆ.. ನಟಿ ಪ್ರಯಾಣಿಸುತ್ತಿದ್ದ ವಿಮಾನ ತಾಂತ್ರಿಕ ಸಮಸ್ಯೆ ಹಿನ್ನೆಲೆ, ಮುಂಬೈ ವಿಮಾನ ನಿಲ್ದಾಣದಲ್ಲೇ ತುರ್ತು ಭೂಸ್ಪರ್ಶ ಮಾಡಿದೆ. ಈ ವಿಚಾರವನ್ನು ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿನಲ್ಲಿ ಶೇರ್ ಮಾಡಿದ್ದಾರೆ. ಇದೇ ವಿಮಾನದಲ್ಲಿ ಶ್ರದ್ಧಾ ದಾಸ್ ಕೂಡ ಪ್ರಯಾಣಿಸುತ್ತಿದ್ದರು. ಶ್ರದ್ಧಾ ದಾಸ್ ಜೊತೆಗಿರುವ ಫೋಟೋವನ್ನು ರಶ್ಮಿಕಾ ಹಂಚಿಕೊಂಡು, "ಇಂದು ನಾವು ಸಾವಿನಿಂದ ಪಾರಾಗಿದ್ದೇವೆ" ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳಿಗೆ ಆಘಾತವಾಗಿದೆ. ತಮ್ಮ ಮೆಚ್ಚಿನ ನಟಿ ಸುರಕ್ಷಿತರಾಗಿದ್ದಾರೆಂಬುದನ್ನು ಖಚಿತಪಡಿಸಿಕೊಂಡ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.