ತಲೆಮಾರುಗಳಿಂದ ಭಾರತೀಯರ ಆಚಾರ ವಿಚಾರಗಳಲ್ಲಿ ಕಾಣುವ ಮಹಾಕಾವ್ಯ 'ರಾಮಾಯಣ'ವು ಹಿರಿತೆರೆಗೆ ಮರಳಲು ಸಜ್ಜಾಗಿದೆ. ಈಗಾಗಲೇ ಈ ಮಹಾಕಾವ್ಯವನ್ನಾಧರಿಸಿ ಹಲವು ಧಾರಾವಾಹಿ, ಸಿನಿಮಾಗಳು ಮೂಡಿಬಂದಿವೆ. ಇದೀಗ ಬಾಲಿವುಡ್ನಿಂದ ಬಿಗ್ ಪ್ರಾಜೆಕ್ಟ್ ರೆಡಿಯಾಗುತ್ತಿದೆ. ಇದರಲ್ಲಿ ಭಾರತೀಯ ಚಿತ್ರರಂಗದ ಖ್ಯಾತನಾಮರು ಮುಖ್ಯಭೂಮಿಕೆಯಲ್ಲಿದ್ದಾರೆ ಎಂಬುದು ಗಮನಾರ್ಹ. ಅದರಲ್ಲೂ ಕನ್ನಡದ ಖ್ಯಾತ ನಟ ಯಶ್ ಮುಖ್ಯಪಾತ್ರ ನಿರ್ವಹಿಸುತ್ತಿರೋದು ವಿಶೇಷ.
ಬಾಲಿವುಡ್ನ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರವು ಆಧುನಿಕ ಚಲನಚಿತ್ರ ನಿರ್ಮಾಣ ತಂತ್ರಗಳೊಂದಿಗೆ ಭಾರತೀಯ ಪೌರಾಣಿಕ ಅಂಶಗಳನ್ನೊಳಗೊಂಡು ತೆರೆ ಮೇಲೆ ಬರಲಿದೆ. ಇಂದು ಹೊರಬಿದ್ದಿರುವ ಮುಖ್ಯ ಅನೌನ್ಸ್ಮೆಂಟ್ ಒಂದರಲ್ಲಿ, ರಣ್ಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ ಎಂಬುದನ್ನು ತಯಾರಕರು ಬಹಿರಂಗಪಡಿಸಿದ್ದಾರೆ. ಚಿತ್ರದ ಮೊದಲ ಭಾಗ 2026ರ ದೀಪಾವಳಿಯಲ್ಲಿ ಮತ್ತು ಎರಡನೇ ಭಾಗ 2027ರ ದೀಪಾವಳಿ ಸಂದರ್ಭ ಚಿತ್ರಮಂದಿರ ಪ್ರವೇಶಿಸಲಿದೆ ಎಂದು ತಿಳಿಸಿದ್ದಾರೆ.
ಹಲವು ದಿನಗಳಿಂದ 'ರಾಮಾಯಣ'ದ ಸುತ್ತಲಿನ ಉತ್ಸಾಹ ದೊಡ್ಡ ಮಟ್ಟದಲ್ಲೇ ಇದೆ. ನಮಿತ್ ಮಲ್ಹೋತ್ರಾ ನಿರ್ಮಾಣದ ಈ ಪ್ರಾಜೆಕ್ಟ್ ಕೆಲಸಗಳು ಕಳೆದ ಒಂದು ದಶಕದಿಂದ ನಡೆಯುತ್ತಾ ಬಂದಿದೆ. ನಿರ್ಮಾಪಕರು ಈ ಬಗ್ಗೆ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮೂಲಕ ಉತ್ಸಾಹ ವ್ಯಕ್ತಪಡಿಸಿದ್ದಾರೆ.
"ಒಂದು ದಶಕಕ್ಕೂ ಹಿಂದೆ, 5,000 ವರ್ಷಗಳಿಂದ ಕೋಟ್ಯಂತರ ಜನರ ಮನಸ್ಸಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಈ ಮಹಾಕಾವ್ಯವನ್ನು ಬಿಗ್ ಸ್ಕ್ರೀನ್ ಮೇಲೆ ತರಲು ನಾನು ನನ್ನ ಕೆಲಸ ಪ್ರಾರಂಭಿಸಿದೆ. ಇಂದು ಆ ಪ್ರಾಜೆಕ್ಟ್ ರೂಪುಗೊಳ್ಳುತ್ತಿರುವ ರೀತಿಗೆ ಸಖತ್ ಥ್ರಿಲ್ ಆಗಿದ್ದೇನೆ. ನಮ್ಮ ತಂಡ ದಣಿವರಿಯದೇ ಕೆಲಸ ಮಾಡುತ್ತಿದೆ. ನಮ್ಮ ಇತಿಹಾಸ, ನಮ್ಮ ಸತ್ಯ ಮತ್ತು ನಮ್ಮ ಸಂಸ್ಕೃತಿಯನ್ನು ಅತ್ಯಂತ ಅಧಿಕೃತ, ಪವಿತ್ರ ಮತ್ತು ಬೆರಗುಗೊಳಿಸುವ ದೃಶ್ಯ ರೂಪಾಂತರವಾಗಿ ಪ್ರಪಂಚದಾದ್ಯಂತದ ಜನರಿಗೆ ತೆರೆ ಮೇಲೆ ಪ್ರಸ್ತುತಪಡಿಸುವ ಉದ್ದೇಶದೊಂದಿಗೆ 'ನಮ್ಮ ರಾಮಾಯಣ' ಪ್ರಗತಿಯಲ್ಲಿದೆ. ನಮ್ಮ ಶ್ರೇಷ್ಠ ಮಹಾಕಾವ್ಯಕ್ಕೆ ಜೀವ ತುಂಬುವ ನಮ್ಮ ಕನಸನ್ನು ಹೆಮ್ಮೆ ಮತ್ತು ಗೌರವದಿಂದ ನನಸಾಗಿಸಲು ನಮ್ಮೊಂದಿಗೆ ಸೇರಿಕೊಳ್ಳಿ" ಎಂದು ಬರೆದುಕೊಂಡಿದ್ದಾರೆ.