ಸೌತ್ ಸೂಪರ್ ಸ್ಟಾರ್ ರಾಮ್ ಚರಣ್ ಹಾಗೂ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ಗೇಮ್ ಚೇಂಜರ್'. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಚಿತ್ರೀಕರಣ ಚುರುಕುಗೊಂಡಿದೆ. ಶಂಕರ್ ನಿರ್ದೇಶನದ 'ಗೇಮ್ ಚೇಂಜರ್' ಚಿತ್ರದ ಶೂಟಿಂಗ್ನಲ್ಲಿ ಪ್ರಮುಖ ತಾರೆಯರು ಭಾಗಿಯಾಗಿದ್ದಾರೆ. ಮೆಚ್ಚಿನ ನಟರು ಶೂಟಿಂಗ್ ಸಲುವಾಗಿ ನಗರದಲ್ಲಿರುವ ವಿಚಾರ ತಿಳಿದು ಉತ್ಸುಕರಾದ ಅಪಾರ ಸಂಖ್ಯೆಯ ಅಭಿಮಾನಿಗಳು ಅವರನ್ನು ನೋಡಲು ಲೊಕೇಶನ್ಗೆ ಬಂದು ಜಮಾಯಿಸಿದರು. ಇದೀಗ ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ಅವರ ಫೋಟೋ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.
'ಗೇಮ್ ಚೇಂಜರ್' ಚಿತ್ರತಂಡ ನಟರ ನೋಟದ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಆದ್ರೆ ಅಭಿಮಾನಿಗಳೀಗ ಚಿತ್ರೀಕರಣದ ಸ್ಥಳದಿಂದ ಫೋಟೋ-ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಲೀಕ್ ಆದ ದೃಶ್ಯಗಳಲ್ಲಿ, ರಾಮ್ ಚರಣ್ ಫಾರ್ಮಲ್ ಶರ್ಟ್, ಪ್ಯಾಂಟ್ ಮತ್ತು ಶೂ ಧರಿಸಿದ್ದು, ಅದಕ್ಕೆ ಹೊಂದಿಕೆಯಾಗುವಂತೆ ಹೇರ್ಸ್ಟೈಲ್ ಇತ್ತು. ಜೊತೆಗೆ ಕಪ್ಪು ಕನ್ನಡಕವನ್ನೂ ಧರಿಸಿದ್ದರು. ಮತ್ತೊಂದೆಡೆ ಕಿಯಾರಾ ಅಡ್ವಾಣಿ ಸರಳವಾಗಿ ಬ್ಲ್ಯೂ-ಗೋಲ್ಡ್ ಕಾಂಬಿನೇಶನ್ನ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹಣೆಗೆ ಇಟ್ಟಿದ್ದ ಸಣ್ಣ ಬಿಂದಿ ಕಿಯಾರಾ ಅವರ ಆಕರ್ಷಣೆ ಹೆಚ್ಚಿಸಿತ್ತು.
ವಿಡಿಯೋವೊಂದರಲ್ಲಿ, ಆರ್ಕೆ ಬೀಚ್ ಬಳಿ ಸೆಟ್ ಹಾಕಿದಂತಿತ್ತು. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ ಹಿನ್ನೆಲೆ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಡಬೇಕಾಯ್ತು. ಭದ್ರತೆಯ ಹೊರತಾಗಿಯೂ ರಾಮ್ ಚರಣ್ ಸುತ್ತಲೂ ಸಾಕಷ್ಟು ಅಭಿಮಾನಿಗಳು ನೆರೆದಿದ್ದರು. ನಟನ ಶೂಟಿಂಗ್ ಪೂರ್ಣಗೊಳ್ಳುವವರೆಗೂ ದೊಡ್ಡ ಜನಸಮೂಹವೇ ಇತ್ತು.